ಬಿಹಾರ: ನಿಂತಿದ್ದ ಕಾರಿನಲ್ಲಿ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Screengrab:X/@PTI_News
ಪಟ್ನಾ: ನಿಂತಿದ್ದ ಕಾರಿನಲ್ಲಿ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಶುಕ್ರವಾರ ಸಂಜೆ ಪಟ್ನಾದ ಇಂದ್ರಪುರಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದ್ರಪುರಿ ಪ್ರದೇಶದಲ್ಲಿ ನಿಲುಗಡೆ ಮಾಡಲಾಗಿದ್ದ ಕಾರಿನಲ್ಲಿ ಓರ್ವ ಬಾಲಕ ಹಾಗೂ ಬಾಲಕಿಯ ಮೃತದೇಹಗಳಿರುವ ಕುರಿತು ಪೊಲೀಸರು ಮಾಹಿತಿ ಸ್ವೀಕರಿಸಿದ್ದಾರೆ. ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತ ದೇಹಗಳನ್ನು ವಶಪಡಿಸಿಕೊಂಡಿದ್ದಾರೆ. ಮೃತ ಮಕ್ಕಳ ಗುರುತನ್ನು ಪತ್ತೆ ಹಚ್ಚಲು ಅವರು ಪ್ರಯತ್ನಿಸುತ್ತಿದ್ದಾರೆ. "ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ" ಎಂದು ಪಟ್ನಾ (ಕೇಂದ್ರ) ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಾ ಹೇಳಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೆ ಅವರ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಮೃತ ಮಕ್ಕಳ ಪೈಕಿ, ಬಾಲಕನಿಗೆ ಸುಮಾರು ಒಂಬತ್ತು ವರ್ಷ ಹಾಗೂ ಬಾಲಕಿಗೆ ಸುಮಾರು ಐದು ವರ್ಷ ಆಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಘಟನೆಯ ಸಂಬಂಧ ತನಿಖೆ ಪ್ರಗತಿಯಲ್ಲಿದೆ.





