ಪಂಜಾಬ್: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪೊಲೀಸ್ ಠಾಣೆಯ ಕೋಣೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ

ಸಾಂದರ್ಭಿಕ ಚಿತ್ರ (Photo: PTI)
ಪಂಜಾಬ್: ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಕೊಳೆತ ಮೃತದೇಹವು ಜಲಂಧರ್ ಜಿಲ್ಲೆಯ ಶಹಕೋಟ್ ಪೊಲೀಸ್ ಠಾಣೆಯ ಕೋಣೆಯೊಂದರಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪೊಲೀಸ್ ಠಾಣೆಯಲ್ಲಿ ಅನೌಪಚಾರಿಕವಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯು ಕಳೆದೆರಡು ದಿನಗಳಿಂದ ಕಾಣೆಯಾಗಿದ್ದ ಎನ್ನಲಾಗಿದೆ. ಎರಡು ದಿನಗಳಿಂದ ಮೃತದೇಹದ ಇರುವಿಕೆಯ ಬಗ್ಗೆ ತಮಗೆ ಸುಳಿವು ಕೂಡಾ ಇರಲಿಲ್ಲ, ಆದರೆ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.
ಮೃತ ವ್ಯಕ್ತಿಯನ್ನು ಬಜ್ವಾ ಕಲಾನ್ ಗ್ರಾಮದ 26 ವರ್ಷದ ಗುರ್ಭೇಜ್ ಸಿಂಗ್ ಅಲಿಯಾಸ್ ಭೇಜಾ ಎಂದು ಗುರುತಿಸಲಾಗಿದೆ.
ಮಾಜಿ ಕಬಡ್ಡಿ ಆಟಗಾರ ಮತ್ತು ದೇಹದಾರ್ಢ್ಯ ಪಟುವಾಗಿದ್ದ ಸಿಂಗ್, ಕಳೆದ ಕೆಲವು ತಿಂಗಳುಗಳಿಂದ ಠಾಣೆಯ ಸಿಬ್ಬಂದಿಗೆ ಚಹಾ ಮತ್ತು ನೀರು ಪೂರೈಸುವ ಮೂಲಕ ಸಹಾಯ ಮಾಡುತ್ತಿದ್ದರು.
ಕುಟುಂಬವು ಅಧಿಕೃತವಾಗಿ ಕಾಣೆಯಾದ ಕುರಿತು ದೂರು ದಾಖಲಿಸದಿದ್ದರೂ, ಆತನ ನಾಪತ್ತೆಯನ್ನು ಶಾಹ್ಕೋಟ್ ಪೊಲೀಸರ ಗಮನಕ್ಕೆ ತಂದಿದ್ದರು. ದುರ್ವಾಸನೆಯಿಂದಾಗಿ ಅಧಿಕಾರಿಗಳು ಠಾಣೆಯ ಟೆರೇಸ್ನಲ್ಲಿರುವ ಕೊಠಡಿಯನ್ನು ಪರಿಶೀಲಿಸಿದಾಗ, ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಹ್ಕೋಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಪೊಲೀಸ್ ಇನ್ಸ್ಪೆಕ್ಟರ್ ಬಲ್ವಿಂದರ್ ಸಿಂಗ್ ಭುಲ್ಲರ್ ಘಟನೆಯನ್ನು ದೃಢಪಡಿಸಿದ್ದಾರೆ.
ಮೃತದೇಹ ಪತ್ತೆಯಾದ ಕೊಠಡಿಯನ್ನು ಅಧಿಕಾರಿಗಳು ವಿರಳವಾಗಿ ಬಳಸುತ್ತಾರೆ ಎಂದು ಅವರು ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
" ವಿಷಕಾರಿ ಕೀಟ ಕಡಿತ ಅಥವಾ ಅಂತಹುದೇ ಕಾರಣದಿಂದ ಮೃತಪಟ್ಟಿರಬೇಕು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಗುರ್ಭೇಜ್ ಒಬ್ಬ ಪ್ರತಿಭಾನ್ವಿತ ಕಬಡ್ಡಿ ಆಟಗಾರ ಮತ್ತು ದೇಹದಾರ್ಢ್ಯ ಪಟು. ಮರಣದ ನಿಖರವಾದ ಕಾರಣವನ್ನು ಮರಣೋತ್ತರ ಪರೀಕ್ಷೆಯ ವರದಿಯಿಂದ ನಿರ್ಧರಿಸಲಾಗುತ್ತದೆ" ಎಂದು ಅಧಿಕಾರಿ ಹೇಳಿದ್ದಾರೆ.
ಮೃತದೇಹವನ್ನು ನಕೋದರ್ನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ, ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಸೋಮವಾರ ಸಂಜೆ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲಾಯಿತು.







