ಒಡಿಶಾ: ಮದುವೆ ಸಮಾರಂಭದಿಂದ ಇಬ್ಬರು ಬಾಲಕಿಯರ ಅಪಹರಣ, ನಾಲ್ವರಿಂದ ಸಾಮೂಹಿಕ ಅತ್ಯಾಚಾರ

ಸಾಂದರ್ಭಿಕ ಚಿತ್ರ (PTI)
ಗಂಜಾಮ್: ಮದುವೆ ಸಮಾರಂಭದಿಂದ 14 ಮತ್ತು 15ರ ಹರೆಯದ ಇಬ್ಬರು ಬಾಲಕಿಯರನ್ನು ಅಪಹರಿಸಿದ್ದ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ಜೂ.3ರಂದು ನಡೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಎಲ್ಲ ನಾಲ್ವರು ಆರೋಪಿಗಳು ವಿಶಾಖಪಟ್ಟಣಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಅವರನ್ನು ಪೋಲಿಸರು ಬಂಧಿಸಿದ್ದಾರೆ.
ತಮ್ಮ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾಗ ಆರೋಪಿಗಳು ಅವರನ್ನು ಅಪಹರಿಸಿದ್ದರು ಮತ್ತು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ನಡೆಸಿ ನಿರ್ಜನ ಸ್ಥಳದಲ್ಲಿ ತೊರೆದು ಹೋಗಿದ್ದಾರೆ ಎಂದು ಅವರ ಕುಟುಂಬಗಳು ದೂರಿನಲ್ಲಿ ಆರೋಪಿಸಿವೆ.
ಇಬ್ಬರು ಆರೋಪಿಗಳು ಬಾಲಕಿಯರಿಗೆ ಆಮಿಷವೊಡ್ಡಿದ್ದರು ಮತ್ತು ಅವರ ಪೈಕಿ ಒಬ್ಬಳಿಗೆ ಅವರ ಪರಿಚಯವಿತ್ತು. ಬಳಿಕ ಇಬ್ಬರು ಆರೋಪಿಗಳ ಜೊತೆಗೆ ಇನ್ನೂ ಇಬ್ಬರು ಸೇರಿಕೊಂಡಿದ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೋಲಿಸರು ತಿಳಿಸಿದರು.
ಬಾಲಕಿಯರು ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದರು. ಜೂ.4ರಂದು ದೂರು ದಾಖಲಾಗಿದ್ದು,ಜೂ.6ರಂದು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.
ಆರೋಪಿಗಳು ಸಂತ್ರಸ್ತ ಬಾಲಕಿಯರ ಗ್ರಾಮದ ನಿವಾಸಿಗಳೇ ಆಗಿದ್ದಾರೆ ಎಂದು ಪೋಲಿಸರು ತಿಳಿಸಿದರು.







