ಟೆರಿಟೊರಿಗಾಗಿ 2 ಸಾವಿರ ಕಿ.ಮೀ. ಕ್ರಮಿಸಿದ ರಾಯಲ್ ಬಂಗಾಳ ಹುಲಿ!
ತಮ್ಮದೇ ಆದ ಪ್ರದೇಶ ಹೊಂದಲು ಕ್ರಮಿಸುವ ʼಪ್ರಾಣಿʼ ಪ್ರಪಂಚ
Photo-NDTV
ಭುವನೇಶ್ವರ: ಟೆರಿಟೊರಿ ಅಥವಾ ವ್ಯಾಪ್ತಿ ಪ್ರದೇಶ ಪ್ರಾಣಿ ಜಗತ್ತಿನಲ್ಲಿ ವಿಶಿಷ್ಟವಾದುದು. ಪ್ರತಿಯೊಂದು ಪ್ರಾಣಿಯೂ ತನ್ನದೇ ಆದ ವ್ಯಾಪ್ತಿ ಪ್ರದೇಶದಲ್ಲಿ ವಾಸಿಸುತ್ತದೆ. ಆ ಪ್ರದೇಶಕ್ಕೆ ಬೇರೆ ಪ್ರಾಣಿಗೆ ಪ್ರವೇಶ ನಿಷಿದ್ಧ. ಒಂದುವೇಳೆ ತನ್ನದೇ ಜಾತಿಯ ಬೇರೆ ಪ್ರಾಣಿ ಬಂದರೆ ಕಾಳಗ ನಡೆಯುವುದು ಇದೆ. ವನ್ಯ ಜೀವಿ ಮಾನವ ಸಂಘರ್ಷದಂತೆ, ಪ್ರಾಣಿಗಳ ಮಧ್ಯೆ ನಡೆಯುವ ಟೆರಿಟೊರಿ ಕಾಳಗದಿಂದ ಹಲವು ಬಾರಿ ಪರಸ್ಪರ ಗಾಯಗೊಳ್ಳುವುದು, ಸಾವನ್ನಪ್ಪುವುದೂ ನಡೆಯುತ್ತದೆ. ಇಂತಹದ್ದೇ ಒಂದು ಘಟನೆ ರಾಯಲ್ ಬಂಗಾಳ ಹುಲಿಯಲ್ಲಿ ಕಂಡು ಬಂದಿದೆ.
ಈ ʼರಾಯಲ್ʼ ಹುಲಿ ಸೂಕ್ತ ಟೆರಿಟೊರಿಗಾಗಿ 2 ಸಾವಿರ ಕಿ.ಮೀ. ಗಿಂತಲೂ ದೂರ ಕ್ರಮಿಸಿದೆ. ಒಡಿಶಾದಲ್ಲಿ ಪತ್ತೆಯಾಗಿದೆ ಎಂದು ಗುರುವಾರ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ಹುಲಿಯು ಮಹಾರಾಷ್ಟ್ರ ಅರಣ್ಯದಲ್ಲೂ ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಹಾರಾಷ್ಟ್ರದ ಅರಣ್ಯದಲ್ಲಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದ ಹುಲಿಯಂಥದ್ದೇ ವಿನ್ಯಾಸದ ಪಟ್ಟೆಗಳನ್ನು ಹೊಂದಿರುವ ಹುಲಿಯು ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಒಡಿಶಾದ ಗಜಪತಿ ಜಿಲ್ಲೆಯ ಮಹೇಂದ್ರ ಅರಣ್ಯ ವಲಯದಲ್ಲಿ ಕಂಡು ಬಂದಿದೆ ಎಂದು ಪರ್ಲಾಖೇಮುಂಡಿ ವಲಯ ಅರಣ್ಯಾಧಿಕಾರಿ ಎಸ್. ಆನಂದ್ ಫೋನ್ ಕರೆಯ ಮೂಲಕ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಗಜಪತಿ ಜಿಲ್ಲೆಯ ತಮ್ಮ ವ್ಯಾಪ್ತಿಯಲ್ಲಿ ಈ ಹುಲಿಯನ್ನು ಪತ್ತೆ ಮಾಡಿದ ನಂತರ, ಈ ಕ್ರೂರ ಮೃಗದ ಚಲನವಲನಗಳ ಮೇಲೆ ಪರ್ಲಾಖೇಮುಂಡಿ ವಲಯ ಅರಣ್ಯಾಧಿಕಾರಿಗಳು ಕಣ್ಣಿಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಮ್ಮ ಪ್ರದೇಶದಲ್ಲಿ ಈ ಹುಲಿಯನ್ನು ಪ್ರಥಮ ಬಾರಿಗೆ ನೋಡಿದಾಗ, ಅದರ ಮೂಲ ಪ್ರದೇಶದ ಬಗ್ಗೆ ತಿಳಿದುಕೊಳ್ಳಲು ಆ ಹುಲಿಯ ಭಾವಚಿತ್ರಗಳು ಹಾಗೂ ಇನ್ನಿತರ ವಿವರಗಳನ್ನು ಭಾರತೀಯ ವನ್ಯಜೀವಿ ಸಂಸ್ಥೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ವನ್ಯಜೀವಿ ಸಂಸ್ಥೆಯು ಕ್ಯಾಮೆರಾದಲ್ಲಿ ಸೆರೆಯಾಗಿರುವ ಹುಲಿಯು ಮಹಾರಾಷ್ಟ್ರದ ಬ್ರಹ್ಮಪುರಿ ಅರಣ್ಯ ವಲಯದಲ್ಲಿ ಈ ಮುನ್ನ ಕಂಡು ಬಂದಿದ್ದ ಹುಲಿಯೇ ಆಗಿದೆ ಎಂದು ದೃಢಪಡಿಸಿದೆ.