ಸುಳ್ಳು ಅತ್ಯಾಚಾರ ದೂರು ನೀಡಿದ್ದ ಇಬ್ಬರು ಮಹಿಳೆಯರ ಬಂಧನ

ಸಾಂದರ್ಭಿಕ ಚಿತ್ರ
ಪಣಜಿ: ವ್ಯಕ್ತಿಯೊಬ್ಬರಿಂದ ಹಣ ಸುಲಿಗೆ ಮಾಡಲು, ಸುಳ್ಳು ಅತ್ಯಾಚಾರದ ದೂರು ಸಲ್ಲಿಸಿದ್ದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಗುಜರಾತ್ ನಿವಾಸಿಗಳಾಗಿದ್ದಾರೆ ಎಂದು ndtv.com ವರದಿ ಮಾಡಿದೆ.
ತನಿಖೆಯ ಸಂದರ್ಭದಲ್ಲಿ, ಮೂವರು ಆರೋಪಿಗಳು ಗೋವಾ ಹಾಗೂ ಗುಜರಾತ್ ರಾಜ್ಯಗಳಲ್ಲಿ ವಿವಿಧ ವ್ಯಕ್ತಿಗಳ ವಿರುದ್ಧ ಹಲವಾರು ಅತ್ಯಾಚಾರ ದೂರುಗಳನ್ನು ದಾಖಲಿಸಿರುವುದು ಬೆಳಕಿಗೆ ಬಂದಿದೆ ಎಂದು ಸೋಮವಾರ ಉತ್ತರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಲ್ಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗುಜರಾತ್ ಮೂಲದ ವ್ಯಕ್ತಿಯೊಬ್ಬರು ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿ, ಇಬ್ಬರು ಮಹಿಳೆಯರು ನನ್ನನ್ನು ಬೆದರಿಸುವ ಉದ್ದೇಶದಿಂದ ನನ್ನೊಂದಿಗೆ ಗೆಳೆತನ ಬೆಳೆಸಿಕೊಂಡು, ನನ್ನಿಂದ ಹಣ ಸುಲಿಗೆ ಮಾಡಲು ನನ್ನ ವಿರುದ್ಧ ಸುಳ್ಳು ಅತ್ಯಾಚಾರದ ದೂರನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದರು ಎಂದು ಅವರು ಹೇಳಿದ್ದಾರೆ.
ದೂರನ್ನು ಆಧರಿಸಿ, ಸೋಮವಾರ ಗೋವಾದ ಕಲನ್ ಗ್ಯೂಟ್ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂವರೂ ಗುಜರಾತ್ ನ ಭಾವನಗರ್ ನಿವಾಸಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆರೋಪಿ ಮಹಿಳೆಯರ ಪೈಕಿ ಓರ್ವ ಮಹಿಳೆಯು ಆಗಸ್ಟ್ 23ರಂದು ಗೋವಾದ ಕೋಲ್ವಾಲೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದಳು. ನಂತರ ಆರೋಪಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು ಎಂದು ಅವರು ಹೇಳಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಪುಣೆ ಮೂಲದ ಉದ್ಯಮಿಯೊಬ್ಬರಿಂದಲೂ ನಾವು ದೂರು ಸ್ವೀಕರಿಸಿದ್ದು, ಆರೋಪಿಗಳು ತಮಗೆ ರೂ. 2 ಲಕ್ಷ ನೀಡಬೇಕು, ಇಲ್ಲದಿದ್ದರೆ ಸುಳ್ಳು ಅತ್ಯಾಚಾರ ದೂರು ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ವಲ್ಸನ್ ತಿಳಿಸಿದ್ದಾರೆ







