"ಭ್ರಷ್ಟಾಚಾರದ ಯುವರಾಜರು": ರಾಹುಲ್ ಗಾಂಧಿ, ತೇಜಸ್ವಿ ಯಾದವ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ (Photo: PTI)
ಪಾಟ್ನಾ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಭ್ರಷ್ಟಾಚಾರದ ಯುವರಾಜರು ಎಂದು ಗುರುವಾರ ತೀಕ್ಷ್ಣ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, “ಅವರು ಸುಳ್ಳು ಭರವಸೆಗಳ ಅಂಗಡಿಯನ್ನು ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.
ಬಿಹಾರದ ಮುಝಫ್ಫರ್ ಪುರ್ ನಲ್ಲಿ ಆಯೋಜನೆಗೊಂಡಿದ್ದ ಬೃಹತ್ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ವಿರೋಧ ಪಕ್ಷಗಳ ಇಬ್ಬರು ನಾಯಕರು ಭಾರತ ಮತ್ತು ಬಿಹಾರದ ಎರಡು ಬಹು ದೊಡ್ಡ ಭ್ರಷ್ಟ ಕುಟುಂಬಗಳನ್ನು ಪ್ರತಿನಿಧಿಸುತ್ತಿದ್ದು, ಅವರಿಬ್ಬರೂ ಬಹು ಕೋಟಿ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ” ಎಂದು ಟೀಕಿಸಿದರು.
“ಬಿಹಾರದ ಚುನಾವಣಾ ಕಣದಲ್ಲಿ ತಮ್ಮನ್ನು ತಾವು ಯುವರಾಜರು ಎಂದು ಭಾವಿಸಿಕೊಂಡಿರುವ ಇಬ್ಬರಿದ್ದಾರೆ. ಅವರು ಸುಳ್ಳು ಭರವಸೆಗಳ ಅಂಗಡಿಯನ್ನು ತೆರೆದಿದ್ದಾರೆ. ಒಬ್ಬರು ಭಾರತದ ಅತಿ ಭ್ರಷ್ಟ ಕುಟುಂಬಕ್ಕೆ ಸೇರಿದ್ದರೆ, ಮತ್ತೊಬ್ಬರು ಬಿಹಾರದ ಅತಿ ಭ್ರಷ್ಟ ಕುಟುಂಬಕ್ಕೆ ಸೇರಿದ್ದಾರೆ. ಅವರಿಬ್ಬರೂ ಸಾವಿರಾರು ಕೋಟಿ ರೂ. ಮೌಲ್ಯದ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ” ಎಂದು ಟೀಕಾಪ್ರಹಾರ ನಡೆಸಿದರು.





