ಪೊಕ್ಸೊ ಕಾಯ್ದೆಯಡಿ ತೀವ್ರ ಲೈಂಗಿಕ ದೌರ್ಜನ್ಯಕ್ಕೆ 20 ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್

Photo | NDTV
ಹೊಸದಿಲ್ಲಿ: ಪೊಕ್ಸೊ ಕಾಯಿದೆಯಡಿಯಲ್ಲಿ 23 ವರ್ಷದ ಯುವಕನಿಗೆ ವಿಧಿಸಿರುವ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಕಡಿತಗೊಳಿಸುವಂತೆ ಕೋರಿ ಸಲ್ಲಿಸಲಾದ ವಿಶೇಷ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು, ಇದು ಪೊಕ್ಸೊ ಕಾಯ್ದೆಯ ಸೆಕ್ಷನ್ 6ಕ್ಕೆ ಸಂಬಂಧಿಸಿದಂತೆ ಶಾಸನಬದ್ಧವಾಗಿ ಕನಿಷ್ಠ ಶಿಕ್ಷೆಯಾಗಿದೆ. ಆದ್ದರಿಂದ, ಈ ಬಗ್ಗೆ ಮಧ್ಯಪ್ರವೇಶಿಸಲು ಯಾವುದೇ ಕಾರಣವನ್ನು ನ್ಯಾಯಾಲಯ ಕಂಡುಕೊಂಡಿಲ್ಲ ಎಂದು ಹೇಳಿದೆ ಮತ್ತು ಶಿಕ್ಷೆಯನ್ನು ಕಡಿತಗೊಳಿಸುವಂತೆ ಸಲ್ಲಿಸಿದ ಎಸ್ಎಲ್ಪಿಯನ್ನು ವಜಾಗೊಳಿಸಿದೆ.
6 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ 23 ವರ್ಷದ ಯುವಕನಿಗೆ ಪೊಕ್ಸೊ ಕಾಯ್ದೆಯಡಿ 20 ವರ್ಷ ಶಿಕ್ಷೆ ವಿಧಿಸಲಾಗಿತ್ತು.
ಅಪರಾಧಿಯ ಪರವಾಗಿ ಹಾಜರಾದ ವಕೀಲರು, ನ್ಯಾಯಾಲಯ ಅನೇಕ ಪ್ರಕರಣಗಳಲ್ಲಿ ಮಾಡಿದಂತೆ ಶಿಕ್ಷೆಯನ್ನು ಕಡಿತಗೊಳಿಸಬೇಕೆಂದು ವಿನಂತಿಸಿದರು. ಅರ್ಜಿದಾರರಿಗೆ ಕೇವಲ 23 ವರ್ಷ ವಯಸ್ಸಾಗಿದ್ದು 20 ವರ್ಷ ಜೈಲಿನಲ್ಲಿ ಕಳೆಯುವುದರಿಂದ ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಎಫ್ಐಆರ್ ದಾಖಲಿಸುವಲ್ಲಿ 6 ದಿನಗಳ ವಿಳಂಬವಾಗಿದೆ ಎಂದು ಕೋರ್ಟ್ನಲ್ಲಿ ವಾದಿಸಿದರು. ಆದರೆ, ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.







