ಕೆಂಪು ಕೋಟೆ ಬಳಿಯ ಸ್ಫೋಟದಿಂದ ಕೂದಲೆಳೆಯ ಅಂತರದಿಂದ ಪಾರಾದ 2005ರ ದಿಲ್ಲಿ ಸ್ಫೋಟದ ಸಂತ್ರಸ್ತ ವ್ಯಕ್ತಿಯ ಮಕ್ಕಳು!

Photo Credit : indiatoday.in
ಹೊಸದಿಲ್ಲಿ: 2005ರ ಸ್ಫೋಟದಲ್ಲಿ ಮೃತಪಟ್ಟಿದ್ದ ಲಾಲ್ ಚಂದ್ ಎಂಬುವವರ ಮಕ್ಕಳಾದ ನಿರ್ಮಿತ್ ಹಾಗೂ ಕರುಣಾ ಸಲುಜಾ ಎಂಬುವವರು ಕೆಂಪು ಕೋಟೆಯ ಬಳಿ ಸೋಮವಾರ ಸಂಭವಿಸಿದ ಕಾರು ಸ್ಫೋಟದಲ್ಲಿ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
13 ಮಂದಿಯನ್ನು ಬಲಿ ಪಡೆದ ಕೆಂಪು ಕೋಟೆ ಬಳಿಯ ಕಾರು ಸ್ಫೋಟ ಸಂಭವಿಸುವುದಕ್ಕೂ ಕೆಲವೇ ನಿಮಿಷಗಳ ಮುನ್ನ ಅವರು ಪ್ರಯಾಣಿಸುತ್ತಿದ್ದ ಕಾರು ಕೆಂಪು ಕೋಟೆ ಪ್ರದೇಶವನ್ನು ಹಾದು ಹೋಗಿತ್ತು ಎನ್ನಲಾಗಿದೆ.
ಈ ಅಣ್ಣ-ತಂಗಿ ತಮ್ಮ ದಿವಂಗತ ತಂದೆಯ ಜೀವ ವಿಮೆಗೆ ಸಂಬಂಧಿಸಿದ ಬಾಕಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುಲು ಪೂರ್ವ ದಿಲ್ಲಿಯ ಗೀತಾ ಕಾಲನಿಯಲ್ಲಿನ ಜೀವ ವಿಮಾ ನಿಗಮ ಕಚೇರಿಗೆ ಭೇಟಿ ನೀಡಿದ ಬಳಿಕ, ದ್ವಾರಕಾದಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದರು ಎಂದು ಹೇಳಲಾಗಿದೆ. ಲಾಲ್ ಕಿಲಾ ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ20 ಕಾರು ಸಂಜೆಯ ಜನದಟ್ಟಣೆಯ ಅವಧಿಯಲ್ಲಿ ಸಂಚಾರಿ ಸಿಗ್ನಲ್ ಬಳಿ ಸ್ಫೋಟಗೊಳ್ಳುವುದಕ್ಕೂ ಕೆಲವೇ ನಿಮಿಷಗಳ ಮುನ್ನ ಅವರ ಕಾರು ಲಾಲ್ ಕಿಲಾ ರಸ್ತೆಯನ್ನು ಹಾದು ಹೋಗಿತ್ತು ಎನ್ನಲಾಗಿದೆ. ಈ ಸ್ಫೋಟದಲ್ಲಿ ಹಲವಾರು ವಾಹನಗಳು ಬೆಂಕಿಗಾಹುತಿಯಾಗಿ, ಹತ್ತಾರು ಮಂದಿ ಗಾಯಗೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಕರುಣಾ ಸಲುಜಾ, “ನಾವು ಅದೃಷ್ಟವಂತರಾಗಿದ್ದೆವು. ಸ್ಫೋಟ ಸಂಭವಿಸುವುದಕ್ಕೂ ಕೆಲವೇ ನಿಮಿಷಗಳ ಮುನ್ನ ನಾವು ಲಾಲ್ ಕಿಲಾ ರಸ್ತೆಯನ್ನು ಹಾದು ಹೋಗಿದ್ದೆವು” ಎಂದು ಹೇಳಿದ್ದಾರೆ. “ನಮ್ಮ ತಂದೆ ಜೀವ ವಿಮೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಸಲು ಗೀತಾ ಕಾಲನಿಗೆ ತೆರಳಿದ್ದ ನಾವು, ಅಲ್ಲಿಂದ ನಮ್ಮ ಮನೆಗೆ ಮರಳುತ್ತಿದ್ದೆವು” ಎಂದೂ ಅವರು ತಿಳಿಸಿದ್ದಾರೆ.
ಸರೋಜಿನಿ ನಗರದಲ್ಲಿ ಜ್ಯೂಸ್ ಕಾರ್ನರ್ ನಡೆಸುತ್ತಿದ್ದ ಲಾಲ್ ಚಂದ್ ಎಂಬುವವರು ಅಕ್ಟೋಬರ್ 29, 2005ರಂದು ದಿಲ್ಲಿಯಲ್ಲಿ ಸಂಭವಿಸಿದ್ದ ಸರಣಿ ಸ್ಫೋಟದಲ್ಲಿ ಮೃತಪಟ್ಟಿದ್ದರು. ಪಹರ್ ಗಂಜ್, ಗೋವಿಂದ್ ಪುರಿಯಲ್ಲಿನ ಡಿಟಿಎಸ್ ಬಸ್ ಹಾಗೂ ಸರೋಜಿನಿ ನಗರದಲ್ಲಿ ನಡೆದಿದ್ದ ಸರಣಿ ಸ್ಫೋಟಗಳಲ್ಲಿ ಸುಮಾರು 62 ಮಂದಿ ಬಲಿಯಾಗಿದ್ದರು.







