2020ರ ದಿಲ್ಲಿ ಗಲಭೆ: ಸೆ.12ಕ್ಕೆ ಸುಪ್ರೀಂ ಕೋರ್ಟ್ ನಿಂದ ಉಮರ್ ಖಾಲಿದ್, ಶಾರ್ಜೀಲ್ ಇಮಾಂ, ಗುಲ್ಫಿಶಾರ ಜಾಮೀನು ಅರ್ಜಿ ವಿಚಾರಣೆ

ಉಮರ್ ಖಾಲಿದ್, ಶಾರ್ಜೀಲ್ ಇಮಾಂ | PC : PTI
ಹೊಸದಿಲ್ಲಿ: 2020ರ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಜೆ ಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್, ಶಾರ್ಜೀಲ್ ಇಮಾಂ ಹಾಗೂ ಗುಲ್ಫಿಶಾ ಫಾತಿಮಾರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ (ಸೆಪ್ಟೆಂಬರ್ 12) ಸುಪ್ರೀಂ ಕೋರ್ಟ್ ನಡೆಸಲಿದೆ.
ಫೆಬ್ರವರಿ 2020ರಲ್ಲಿ ನಡೆದಿದ್ದ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಯುಎಪಿಎ ಕಾಯ್ದೆಯಡಿಯ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ನಂತರ, ಅವರೆಲ್ಲ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 2ರಂದು ದಿಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಈ ಅರ್ಜಿಯ ವಿಚಾರಣೆಯನ್ನು ನ್ಯಾ. ಅರವಿಂದ್ ಕುಮಾರ್ ಹಾಗೂ ನ್ಯಾ. ಅಂಜಾರಿಯಾರನ್ನೊಳಗೊಂಡ ನ್ಯಾಯಪೀಠ ನಡೆಸುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ, ಧರಣಿಗಳು ಅಥವಾ ಪ್ರತಿಭಟನೆಗಳ ನೆಪದಲ್ಲಿ ಪಿತೂರಿಯ ಹಿಂಸಾಚಾರ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದ ದಿಲ್ಲಿ ಹೈಕೋರ್ಟ್, ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಂ ಸೇರಿದಂತೆ ಒಂಬತ್ತು ಮಂದಿಯ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿತ್ತು.
ದಿಲ್ಲಿ ಹೈಕೋರ್ಟ್ ನಿಂದ ಜಾಮೀನು ನಿರಾಕರಣೆಗೊಳಗಾದವರ ಪೈಕಿ ಉಮರ್ ಖಾಲಿದ್, ಇಮಾಮ್, ಫಾತಿಮಾ, ಮುಹಮ್ಮದ್ ಸಲೀಮ್ ಖಾನ್, ಶಿಫಾ ಉರ್ ರೆಹಮಾನ್, ಅತ್ತರ್ ಖಾನ್, ಮೀರನ್ ಹೈದರ್, ಅಬ್ದುಲ್ ಖಾಲಿದ್ ಸೈಫಿ ಹಾಗೂ ಶಾದಾಬ್ ಅಹ್ಮದ್ ಸೇರಿದ್ದರು.
ಈ ಪ್ರಕರಣದ ಮತ್ತೊಬ್ಬ ಆರೋಪಿ ತಸ್ಲೀಮಾ ಅಹ್ಮದ್ ಅವರ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ನ ಮತ್ತೊಂದು ನ್ಯಾಯಪೀಠ ಕೂಡಾ ಸೆಪ್ಟೆಂಬರ್ 2ರಂದು ತಳ್ಳಿ ಹಾಕಿತ್ತು.







