2020ರ ದಿಲ್ಲಿ ಹಿಂಸಾಚಾರ: 22ರ ಹರೆಯದ ಯುವಕನ ಕೊಲೆ ಪ್ರಕರಣದ ಏಕೈಕ ಆರೋಪಿ ಖುಲಾಸೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಫೆಬ್ರವರಿ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಗಲಭೆ ಸಂದರ್ಭದಲ್ಲಿ 22ರ ಹರೆಯದ ಯುವಕನೋರ್ವ ಕೊಲೆ ಪ್ರಕರಣದ ಆರೋಪಿಯನ್ನು ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ.
ನ್ಯಾ.ಪುಲಸ್ತ್ಯ ಪ್ರಮಾಚಲ ಅವರು ಫೆ.24ರಂದು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಮುಹಮ್ಮದ್ ಶಾನವಾಜ್ ಅಲಿಯಾಸ್ ಶಾನುವನ್ನು ಖುಲಾಸೆಗೊಳಿಸಿದ್ದಾರೆ.
ಪ್ರಕರಣವು ದಿಲ್ಬರ್ ನೇಗಿ ಎಂಬ ಯುವಕನ ಹತ್ಯೆಗೆ ಸಂಬಂಧಿಸಿದೆ. 2020ರ ಫೆ.26ರಂದು ಈಶಾನ್ಯ ದಿಲ್ಲಿಯ ಚಮನ್ ಪಾರ್ಕ್ ಪ್ರದೇಶದ ಗೋದಾಮೊಂದರಲ್ಲಿ ನೇಗಿಯ ಅರೆಸುಟ್ಟಿದ್ದ ಮೃತದೇಹ ಪತ್ತೆಯಾಗಿತ್ತು. ಶಾನವಾಜ್ ಗೋದಾಮಿನ ಮೇಲೆ ಪೆಟ್ರೋಲ್ ಬಾಂಬ್ಗಳನ್ನು ಎಸೆದಿದ್ದು ನೇಗಿಯ ಸಾವಿಗೆ ಕಾರಣವಾಗಿತ್ತು ಎಂದು ಆರೋಪಿಸಲಾಗಿತ್ತು.
ಅಕ್ಟೋಬರ್ 2023ರಲ್ಲಿ ಪ್ರಕರಣದಲ್ಲಿಯ 12 ಆರೋಪಿಗಳ ಪೈಕಿ 11 ಜನರನ್ನು ದೋಷಮುಕ್ತಗೊಳಿಸಿದ್ದ ನ್ಯಾಯಾಲಯವು ಶಾನವಾಜ್ ವಿರುದ್ಧ ಆರೋಪಗಳನ್ನು ರೂಪಿಸಿತ್ತು.
ಗೋದಾಮಿಗೆ ಬೆಂಕಿ ಹಚ್ಚುತ್ತಿದ್ದನ್ನು ತಾನು ನೋಡಿರುವುದನ್ನು ಪ್ರಮುಖ ಪಾಸಿಕ್ಯೂಷನ್ ಸಾಕ್ಷಿಯು ನಿರಾಕರಿಸಿದ್ದಾನೆ ಮತ್ತು ಶಾನವಾಜ್ನನ್ನು ತಾನು ಗುರುತಿಸಿದ್ದೆ ಎಂಬ ಇನ್ನೋರ್ವ ಸಾಕ್ಷಿದಾರನ ಹೇಳಿಕೆಯು ವಿಶ್ವಾಸಾರ್ಹವಾಗಿಲ್ಲ ಎಂದು ಫೆ.24ರ ತೀರ್ಪಿನಲ್ಲಿ ಹೇಳಿರುವ ನ್ಯಾಯಾಲಯವು,ಪ್ರಕರಣದಲ್ಲಿ ಉಲ್ಲೇಖಿಸಲಾಗಿರುವ ಇನ್ನೋರ್ವ ಪ್ರತ್ಯಕ್ಷದರ್ಶಿಯು ಸಹ ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ಶಾನವಾಜ್ ಗೋದಾಮನ್ನು ಪ್ರವೇಶಿಸಿದ್ದನ್ನು ಅಥವಾ ಆ ಸಮಯದಲ್ಲಿ ದಂಗೆಕೋರರು ಗೋದಾಮಿಗೆ ಬೆಂಕಿ ಹಚ್ಚುತ್ತಿರುವುದನ್ನು ನೋಡಿರುವುದನ್ನು ನಿರಾಕರಿಸಿದ್ದಾನೆ ಎಂದು ತಿಳಿಸಿದೆ.
ಗೋದಾಮಿಗೆ ಬೆಂಕಿ ಹಚ್ಚುವ ಮುನ್ನ ದಂಗೆಕೋರರು ಪ್ರದೇಶದಲ್ಲಿ ಕಲ್ಲುತೂರಾಟ ನಡೆಸಿದ್ದರು,ಹಿಂದು ವಿರೋಧಿ ಘೋಷಣೆಗಳನ್ನು ಕೂಗಿದ್ದರು,ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಈಶಾನ್ಯ ದಿಲ್ಲಿಯಲ್ಲಿ 2020,ಫೆಬ್ರವರಿಯಲ್ಲಿ ಸಿಎಎ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದು,53 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.
ಹಿಂಸಾಚಾರವು ನರೇಂದ್ರ ಮೋದಿ ಸರಕಾರದ ವಿರುದ್ಧ ವ್ಯಾಪಕ ಸಂಚಿನ ಭಾಗವಾಗಿತ್ತು ಮತ್ತು ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದ್ದವರೇ ಇದನ್ನು ರೂಪಿಸಿದ್ದರು ಎಂದು ಪೋಲಿಸರು ಪ್ರತಿಪಾದಿಸಿದ್ದರು.







