ಛತ್ತೀಸ್ ಗಢ | ಕಂಕೇರ್ ನಲ್ಲಿ 21 ಮಂದಿ ನಕ್ಸಲರ ಶರಣಾಗತಿ

ಸಾಂದರ್ಭಿಕ ಚಿತ್ರ | Photo Credit : PTI
ಕಂಕೇರ್: ರವಿವಾರ ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ಸುಮಾರು 21 ಮಂದಿ ನಕ್ಸಲೀಯರು ಶರಣಾಗತರಾಗಿದ್ದು, 18ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರು ಬಸ್ತಾರ್ ವಲಯದ ಪೊಲೀಸರು ಚಾಲನೆ ನೀಡಿದ್ದ ‘ಪೂನಾ ಮಾರ್ಗೆಂ: ಮರು ಏಕೀಕರಣದ ಮೂಲಕ ಪುನರ್ವಸತಿ’ ಉಪಕ್ರಮದಡಿ ತಮ್ಮ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
“ಶರಣಾಗತರಾಗಿರುವ 21 ಮಂದಿ ನಕ್ಸಲರ ಪೈಕಿ ವಿಭಾಗೀಯ ಸಮಿತಿ ಕಾರ್ಯದರ್ಶಿ ಮುಕೇಶ್ ಹಾಗೂ 13 ಮಂದಿ ಮಹಿಳಾ ಬಂಡುಕೋರರು ಸೇರಿದ್ದಾರೆ. ಈ 21 ಮಂದಿಯ ಪೈಕಿ ನಾಲ್ವರು ವಿಭಾಗೀಯ ಸಮಿತಿ ಸದಸ್ಯರು, ಒಂಭತ್ತು ಮಂದಿ ಪ್ರದೇಶ ಸಮಿತಿ ಸದಸ್ಯರು ಹಾಗೂ ನಿಷೇಧಿಸಲಾಗಿರುವ ಹೋರಾಟಗಳ ಭಾಗವಾಗಿದ್ದ ಕೆಳ ದರ್ಜೆಯ ಎಂಟು ಮಂದಿ ಸದಸ್ಯರು ಸೇರಿದ್ದಾರೆ. ಅವರೆಲ್ಲ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾವೋವಾದಿ)ಯ ಉತ್ತರ ಉಪ ವಲಯ ದಳವಾದ ಕೇಶ್ಕಾಲ್ ವಿಭಾಗದ ಕ್ಯೂಮರಿ/ಕಿಸ್ಕೋಡೊ ಪ್ರದೇಶ ಸಮಿತಿಗೆ ಸೇರಿದವರಾಗಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಶರಣಾಗತರಾದ ನಕ್ಸಲರು ಮೂರು ಎಕೆ-47 ರೈಫಲ್ಸ್, ಎರಡು ಇನ್ಸಾಸ್ ರೈಫಲ್ಸ್, ನಾಲ್ಕು ಎಸ್ಎಲ್ಆರ್ ರೈಫಲ್ಸ್, ಆರು .303 ರೈಫಲ್ಸ್, ಎರಡು ಏಕ ನಳಿಕೆಯ ರೈಫಲ್ ಗಳು ಹಾಗೂ ಒಂದು ಬ್ಯಾರೆಲ್ ಗ್ರನೇಡ್ ಲಾಂಚರ್ ಗಳನ್ನು ಭದ್ರತಾ ಸಿಬ್ಬಂದಿಗಳಿಗೆ ಹಸ್ತಾಂತರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ತಮ್ಮ ತಲೆಗೆ 9.18 ಕೋಟಿ ರೂ. ಬಹುಮಾನದ ಘೋಷಣೆಗೀಡಾಗಿದ್ದ ಕೇಂದ್ರ ಸಮಿತಿಯ ಸದಸ್ಯ ರೂಪೇಶ್ ಅಲಿಯಾಸ್ ಸತೀಶ್ ಸೇರಿದಂತೆ ಒಟ್ಟು 210 ಮಂದಿ ನಕ್ಸಲರು ಅಕ್ಟೋಬರ್ 17ರಂದು ಬಸ್ತಾರ್ ಜಿಲ್ಲೆಯ ಜಗದಲ್ಪುರ್ ನಲ್ಲಿ ಶರಣಾಗಿದ್ದರು. ಅವರು 153ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನೂ ಹಸ್ತಾಂತರಿಸಿದ್ದರು.







