ಭಾರತದ ಒಂದು ಜಿಲ್ಲೆಗೇ 2.2 ಲಕ್ಷ H-1B ವೀಸಾ ಮಂಜೂರು: ಅಮೆರಿಕದ ಅರ್ಥಶಾಸ್ತ್ರಜ್ಞ ಡೇವ್ ಬ್ರಾಟ್ ಆರೋಪ

ಸಾಂದರ್ಭಿಕ ಚಿತ್ರ PC: istockphoto
ವಾಷಿಂಗ್ಟನ್/ಚೆನ್ನೈ: H-1B ವೀಸಾ ದುರುಪಯೋಗದ ವಿಚಾರ ಅಮೆರಿಕದಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಈ ಬಾರಿ ನೇರವಾಗಿ ಭಾರತವೇ ಗುರಿಯಾಗಿಸಲಾದ್ದು, ಅಮೆರಿಕದ ಮಾಜಿ ಪ್ರತಿನಿಧಿ ಹಾಗೂ ಅರ್ಥಶಾಸ್ತ್ರಜ್ಞ ಡಾ. ಡೇವ್ ಬ್ರಾಟ್ ಅವರು ಮಾಡಿರುವ ಟೀಕೆ ವಿವಾದಕ್ಕೆ ಕಾರಣವಾಗಿದೆ. ವಾರ್ಷಿಕ ಮಿತಿ 85,000 ಆಗಿದ್ದರೂ, ಭಾರತದಲ್ಲಿ ಚೆನ್ನೈಗೆ 2.20 ಲಕ್ಷ H-1B ವೀಸಾಗಳು ಮಂಜೂರಾಗಿವೆ ಎಂದು ಅವರು ಆರೋಪಿಸಿದ್ದಾರೆ.
ಸ್ಟೀವ್ ಬ್ಯಾನನ್ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಬ್ರಾಟ್, “H-1B ವೀಸಾ ಕೇಳುವಾಗ ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ; ಈ ವಂಚಿತ ವೀಸಾಗಳು ಅವರ ಭವಿಷ್ಯ ಕದ್ದಿವೆ” ಎಂದು ಕಟುವಾಗಿ ಟೀಕಿಸಿದ್ದಾರೆ. H-1B ವೀಸಾಗಳಲ್ಲಿ ಚೀನಾದ ಪಾಲು ಕೇವಲ 12 ಶೇಕಡಾ ಎಂದೂ ಅವರು ಹೇಳಿದ್ದಾರೆ.
2024ರಲ್ಲಿ ಚೆನ್ನೈ ನಲ್ಲಿನ ಅಮೆರಿಕದ ರಾಯಭಾರ ಕಚೇರಿ 2.20 ಲಕ್ಷ H-1B ಮತ್ತು 1.40 ಲಕ್ಷ H-4 ಅವಲಂಬಿತ ವೀಸಾಗಳನ್ನು ಪ್ರಕ್ರಿಯೆಗೊಳಿಸಿದೆ.
“80–90% ಅರ್ಜಿಗಳು ನಕಲಿ”: ಅಮೆರಿಕ ರಾಜತಾಂತ್ರಿಕರ ಗಂಭೀರ ಆರೋಪ
ಈ ನಡುವೆ, ಭಾರತೀಯ ಮೂಲದ ಅಮೆರಿಕದ ವಿದೇಶಾಂಗ ಸೇವೆಯಲ್ಲಿನ ಅಧಿಕಾರಿ ಮಹ್ವಾಶ್ ಸಿದ್ದಿಕಿ ಅವರು ಎರಡು ದಶಕಗಳ ಹಿಂದಿನ ಚೆನ್ನೈ ಕಾನ್ಸುಲೇಟ್ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಂದು ಚರ್ಚೆಗೆ ಕಾರಣವಾಗಿದೆ.
2005–07ರ ಅವಧಿಯಲ್ಲಿ ಕಾನ್ಸುಲೇಟ್ನಲ್ಲಿ ಸೇವೆ ಸಲ್ಲಿಸಿದ ಅವರು, “ಭಾರತದಿಂದ ಸಲ್ಲಿಸಲಾಗುವ H-1B ಅರ್ಜಿಗಳಲ್ಲಿ 80–90% ನಕಲಿ ದಾಖಲೆಗಳೇ ತುಂಬಿರುತ್ತದೆ. ನಕಲಿ ಪದವಿಗಳು, ನಕಲಿ ವಿವಾಹ ಪ್ರಮಾಣಪತ್ರಗಳು, ನಕಲಿ ಶೈಕ್ಷಣಿಕ ದಾಖಲೆಗಳು ಇವೆಲ್ಲ ಸಾಮಾನ್ಯವಾಗಿದ್ದವು” ಎಂದು ಅವರು ಆರೋಪಿಸಿದ್ದಾರೆ.
ಚೆನ್ನೈ ಕಾನ್ಸುಲೇಟ್ ಆಗ ಹೈದರಾಬಾದ್, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಬಂದ ಅರ್ಜಿಗಳನ್ನು ನಿರ್ವಹಿಸುತ್ತಿತ್ತು. ಇದರಲ್ಲೂ ಹೈದರಾಬಾದ್ ಅತ್ಯಂತ ಕಳವಳಕಾರಿ ಕೇಂದ್ರವಾಗಿದ್ದು, ಅಮೀರ್ಪೇಟೆಯಲ್ಲಿ ವೀಸಾ ಪಡೆಯಲು ನಕಲಿ ದಾಖಲೆಗಳನ್ನು ‘ಪ್ಯಾಕೇಜ್’ ಆಗಿ ನೀಡುವ ಮಳಿಗೆಗಳು ಇದ್ದವು ಎಂದು ಅವರು ಹೇಳಿದ್ದಾರೆ.
ಈ ಪೈಕಿ ಮಹ್ವಾಶ್ ಸಿದ್ದಿಕಿ ಅವರು ಸ್ವತಃ ಕನಿಷ್ಠ 51,000 H-1B ವೀಸಾ ಅರ್ಜಿಗಳನ್ನು ವಿಲೇವಾರಿ ಮಾಡಿರುವುದಾಗಿ ತಿಳಿಸಿದ್ದಾರೆ.







