‘ಆಗಸ್ಟ್ನೊಳಗೆ ಮಾನವಮಲಹೊರುವಿಕೆ ಮುಕ್ತ ಭಾರತ’ ಗುರಿ ತಲುಪುವಲ್ಲಿ 246 ಜಿಲ್ಲೆಗಳು ವಿಫಲ?

ಸಾಂದರ್ಭಿಕ ಚಿತ್ರ \ Photo: PTI
ಹೊಸದಿಲ್ಲಿ: ಭಾರತವನ್ನು ಮಾನವಮಲ ಹೊರುವಿಕೆ ಮುಕ್ತ ದೇಶವಾಗಿ ಘೋಷಿಸಲು ಕೇಂದ್ರ ಸರಕಾರ ವಿಧಿಸಿರುವ ಗಡುವು ಸನ್ನಿಹಿತವಾಗಿದ್ದರೂ, ಸುಮಾರು 246 ಜಿಲ್ಲೆಗಳು ಈ ಅಮಾನವೀಯ ಆಚರಣೆಯನ್ನು ತೊಡೆದುಹಾಕಿರುವುದನ್ನು ಇನ್ನೂ ಘೋಷಿಸಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ.
ಸಾಮಾಜಿಕ ನ್ಯಾಯ ಸಚಿವ ವೀರೇಂದ್ರ ಕುಮಾರ್ ನೇತೃತ್ವದ ಕೇಂದ್ರೀಯ ಕಣ್ಗಾವಲು ಸಮಿತಿಯ ಎಂಟನೇ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.
ದೇಶದ 766 ಜಿಲ್ಲೆಗಳ ಪೈಕಿ ಸುಮಾರು 520 ಜಿಲ್ಲೆಗಳು, ತಾವು ಮಾನವಮಲಹೊರುವಿಕೆ ಪದ್ಧತಿಯಿಂದ ಮುಕ್ತವಾಗಿರುವುದಾಗಿ ಘೋಷಿಸಿದ್ದರೆ, 246 ಜಿಲ್ಲೆಗಳು ಈ ಬಗ್ಗೆ ಇನ್ನಷ್ಟೇ ವರದಿಯನ್ನು ಸಲ್ಲಿಸಬೇಕಾಗಿದೆ’’ ಎಂದು ಸಭೆಯಲ್ಲಿ ಪ್ರಕಟಿಸಲಾದ ಅಂಕಿಅಂಶಗಳಿಂದ ತಿಳಿದುಬಂದಿದೆ.
‘‘ಆಗಸ್ಟ್ 2023ರೊಳಗೆ ಭಾರತವನ್ನು ಮಾನವಮಲಹೊರುವಿಕೆ ಮುಕ್ತವೆಂದು ಘೋಷಿಸುವ ನಮ್ಮ ದೂರದರ್ಶಿತ್ವಕ್ಕೆ ನಾವು ಬದ್ಧರಾಗಿದ್ದೇವೆ’’ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ವರದಿಯನ್ನು ನೀಡದ ರಾಜ್ಯಗಳು ಒಂದೊ ತಮ್ಮ ಎಲ್ಲಾ ಜಿಲ್ಲೆಗಳು ಮಾನವ ಮಲಹೊರುವಿಕೆಯಿಂದ ಮುಕ್ತವೆಂದು ಘೋಷಿಸಬೇಕು ಇಲ್ಲವೇ
ತಮ್ಮಲ್ಲಿರುವ ನೈರ್ಮಲ್ಯರಹಿತ ಪಾಯಿಖಾನೆಗಳ ದತ್ತಾಂಶಗಳು ಹಾಗೂ ಮ್ಯಾನ್ಯುವಲ್ ಸ್ಕಾವೆಂಜರ್ಗಳು ಮತ್ತು ಅವರ ಪುನರ್ವಸತಿಗಾಗಿ ಒದಗಿಸಲಾದ ಸೌಲಭ್ಯಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ವರದಿ ಹೇಳಿದೆ.







