ಮಧ್ಯಪ್ರದೇಶ | ʼಫಿನಾಯಿಲ್ʼ ಸೇವಿಸಿದ 25 ಲಿಂಗತ್ವ ಅಲ್ಪಸಂಖ್ಯಾತರು; ಆಸ್ಪತ್ರೆಗೆ ದಾಖಲು

ಸಾಂದರ್ಭಿಕ ಚಿತ್ರ (PTI)
ಇಂದೋರ್: ಬುಧವಾರ ರಾತ್ರಿ ಮಧ್ಯಪ್ರದೇಶದ ಇಂದೋರ್ ನಲ್ಲಿ ಸುಮಾರು 25 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಫಿನಾಯಿಲ್ ಸೇವಿಸಿರುವ ಘಟನೆ ನಡೆದಿದ್ದು, ಅವರನ್ನು ತಕ್ಷಣವೇ ಸರಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸುಮಾರು 25 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಒಟ್ಟಾಗಿ ಫಿನಾಯಿಲ್ ಸೇವಿಸಿದ್ದರು ಎಂದು ಹೇಳಲಾಗಿದ್ದು, ಈ ವಿಷಯ ತಕ್ಷಣದಲ್ಲಿ ದೃಢಪಟ್ಟಿಲ್ಲ” ಎಂದು ಸರಕಾರಿ ಮಹಾರಾಜ ಯಶ್ವಂತರಾವ್ ಆಸ್ಪತ್ರೆಯ ಉಸ್ತುವಾರಿ ಅಧೀಕ್ಷಕ ಡಾ. ಬಸಂತ್ ಕುಮಾರ್ ನಿಂಗ್ವಾಲ್ ತಿಳಿಸಿದ್ದಾರೆ.
ಆದರೆ, ಯಾವ ರೋಗಿಗಳೂ ಗಂಭೀರ ಸ್ಥಿತಿಯಲ್ಲಿಲ್ಲ ಎಂದು ಅವರು ದೃಢಪಡಿಸಿದ್ದಾರೆ.
ಯಾವ ಕಾರಣಕ್ಕೆ ಇವರು ಈ ಕೃತ್ಯಕ್ಕೆ ಮುಂದಾದರು ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಈ ಘಟನೆಯ ಕುರಿತು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಾಂದೋತಿಯಾರನ್ನು ಪ್ರಶ್ನಿಸಿದಾಗ, “ತನಿಖೆಯ ನಂತರವಷ್ಟೇ ಲಿಂಗತ್ವ ಅಲ್ಪಸಂಖ್ಯಾತರು ಯಾವ ವಸ್ತುವನ್ನು ಸೇವಿಸಿದ್ದಾರೆ ಹಾಗೂ ಯಾಕಾಗಿ ಸೇವಿಸಿದ್ದಾರೆ ಎಂಬುದು ಸ್ಪಷ್ಟವಾಗಲಿದೆ” ಎಂದು ಹೇಳಿದ್ದಾರೆ.





