ಉತ್ತರ ಸಿಕ್ಕಿಂನಲ್ಲಿ ಭೂಕುಸಿತ: 28 ಜನರ ಏರ್ಲಿಫ್ಟ್

photo Credit: PTI
ಗ್ಯಾಂಗ್ಟಕ್: ಸಿಕ್ಕಿಂನ ಉತ್ತರ ಭಾಗದ ಚಟೇನ್ ನಲ್ಲಿ ಸಿಲುಕಿದ್ದ ಮೂವರು ಅಪ್ರಾಪ್ತರು ಸೇರಿದಂತೆ 28 ಮಂದಿಯನ್ನು ಸಿಕ್ಕಿಂ ಸರಕಾರ ರವಿವಾರ ಸ್ಥಳಾಂತರಿಸಿದೆ.
ಭಾರೀ ಮಳೆಯಿಂದ ಸಂಭವಿಸಿದ ಹಲವು ಭೂಕುಸಿತದಿಂದ ಇಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತದಿಂದ ಚಟೇನ್ ನಲ್ಲಿ ಸಿಲುಕಿದ ಕೆಲವು ಸ್ಥಳೀಯರು, ಟ್ಯಾಕ್ಸಿ ಚಾಲಕರು ಹಾಗೂ ಸರಕಾರಿ ಅಧಿಕಾರಿಗಳು ನೆರವು ನೀಡುವಂತೆ ಕೋರಿದ್ದರು. ಕೂಡಲೇ ಸ್ಪಂದಿಸಿದ ಆಡಳಿತ ಅವರನ್ನು ರಕ್ಷಿಸಲು ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆಯಿತು.
‘‘ರಾಜ್ಯ ಸರಕಾರ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿತು ಹಾಗೂ ಮೂವರು ಅಪ್ರಾಪ್ತರು ಸೇರಿದಂತೆ 28 ಮಂದಿಯನ್ನು ಯಶಸ್ವಿಯಾಗಿ ಸ್ಥಳಾಂತರಿಸಿತು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಾಂತರಗೊಂಡ ಎಲ್ಲರೂ ಪಕ್ಯೋಂಗ್ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದರು ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗಿನ ಪ್ರತಿಕೂಲ ಪರಿಸ್ಥಿತಿ ರಸ್ತೆ ಸಂಪರ್ಕಕ್ಕೆ ಹಾಗೂ ಈ ಪ್ರದೇಶಕ್ಕೆ ತೆರಳಲು ಅಡ್ಡಿ ಉಂಟು ಮಾಡಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಂಘಟಿತ ಪರಿಹಾರ ಹಾಗೂ ಸ್ಥಳಾಂತರ ಪ್ರಯತ್ನಗಳ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ.







