Uttar Pradesh: SIR ಪ್ರಕ್ರಿಯೆ ಪೂರ್ಣ; ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರುಗಳು ಡಿಲೀಟ್ ಸಾಧ್ಯತೆ!

ಸಾಂದರ್ಭಿಕ ಚಿತ್ರ (PTI)
ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಶುಕ್ರವಾರ ಅಂತ್ಯಗೊಂಡಿದ್ದು, ಇದರ ಪರಿಣಾಮವಾಗಿ ರಾಜ್ಯದ ಮತದಾರರ ಪಟ್ಟಿಯಿಂದ ಸುಮಾರು 2.89 ಕೋಟಿ ಹೆಸರುಗಳು ಅಳಿಸಲ್ಪಡುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
SIR ಪ್ರಕ್ರಿಯೆಗೆ ಮುನ್ನ ರಾಜ್ಯದಲ್ಲಿ 15.44 ಕೋಟಿ ಮತದಾರರ ಹೆಸರುಗಳು ಇದ್ದವು. ಪರಿಷ್ಕರಣೆ ಬಳಿಕ ಈ ಸಂಖ್ಯೆ 12.55 ಕೋಟಿಗೆ ಇಳಿಯುವ ನಿರೀಕ್ಷೆ ಇದೆ. ಡಿ. 31ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವವರು 2026ರ ಜ. 30ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕ ಹೆಸರುಗಳನ್ನು ಮರು ಸೇರ್ಪಡೆಗೊಳಿಸಲು ಅವಕಾಶವಿದ್ದು, ಫೆಬ್ರವರಿ 28ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಜಿಲ್ಲಾವಾರು ಅಳಿಸುವಿಕೆಯ ವಿವರಗಳ ಪ್ರಕಾರ, ಲಕ್ನೋದಲ್ಲಿ ಗರಿಷ್ಠ 12 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಪ್ರಯಾಗ್ ರಾಜ್ ನಲ್ಲಿ 11 ಲಕ್ಷ, ಕಾನ್ಪುರದಲ್ಲಿ 9 ಲಕ್ಷ ಹೆಸರುಗಳು ಅಳಿಸಲಾಗಿದೆ. ಅಲ್ಲದೆ ಆಗ್ರಾ ಮತ್ತು ಗಾಝಿಯಾಬಾದ್ ಜಿಲ್ಲೆಗಳಲ್ಲಿ ತಲಾ ಸುಮಾರು ಎಂಟು ಲಕ್ಷ ಹೆಸರುಗಳು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಲಸೆ, ನಕಲಿ ಮತದಾರರು, ಮೃತಪಟ್ಟವರು ಹಾಗೂ ಕಾಣೆಯಾದ ಮತದಾರರು ಸೇರಿದಂತೆ ವಿವಿಧ ಕಾರಣಗಳಿಂದ ಹೆಸರುಗಳನ್ನು ಅಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಅತಿಹೆಚ್ಚು ಅಳಿಸುವಿಕಗೆ ಮತದಾರರು ವಲಸೆ ಹೋಗಿರುವುದು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನೂ ಶೇಕಡಾ 9.81 ಮತದಾರರನ್ನು ‘ಮ್ಯಾಪ್ ಮಾಡದ’ ವರ್ಗದಲ್ಲಿ ಗುರುತಿಸಲಾಗಿದೆ. ಈ ವರ್ಗದಲ್ಲಿರುವ ಮತದಾರರಿಗೆ ತಮ್ಮ ಗುರುತನ್ನು ದೃಢೀಕರಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ಕಳುಹಿಸಲಾಗುತ್ತದೆ. ದಾಖಲೆ ಪರಿಶೀಲನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SIR ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದು, ತಮ್ಮ ಬೆಂಬಲಿಗರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ತೆಗೆದುಹಾಕಿ ಆಡಳಿತಾರೂಢ ಬಿಜೆಪಿಗೆ ಲಾಭ ಮಾಡಿಕೊಡುವ ಪ್ರಯತ್ನವಾಗಿದೆ ಎಂದು ಆರೋಪಿಸಿವೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಅನರ್ಹರು ಹಾಗೂ ಅಕ್ರಮ ವಲಸಿಗರ ಹೆಸರುಗಳನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.







