29 ವರ್ಷಗಳ ಹಿಂದೆ ಆಗಸದಲ್ಲೇ ವಿಮಾನಗಳ ನಡುವೆ ನಡೆದಿತ್ತು ವಿಶ್ವದ ಅತೀ ಭೀಕರ ಅಪಘಾತ!
ಏರ್ ಟ್ರಾಫಿಕ್ ಕಂಟ್ರೋಲರ್ ನೀಡಿದ ಸೂಚನೆ ಅರ್ಥವಾಗದೇ ಸೌದಿಯ ವಿಮಾನಕ್ಕೆ ಢಿಕ್ಕಿ ಹೊಡೆದಿದ್ದ ʼಕಝಕಿಸ್ತಾನ ಏರ್ಲೈನ್ಸ್ʼ ಪೈಲೆಟ್

PC: X \ @OnDisasters
ಹೊಸದಿಲ್ಲಿ: ಗುಜರಾತ್ನ ಅಹ್ಮದಾಬಾದ್ ವಿಮಾನ ನಿಲ್ದಾಣದ ಸಮೀಪ ಗುರುವಾರ ಭೀಕರ ವಿಮಾನ ದುರಂತ ಸಂಭವಿಸಿದ್ದು, 242 ಮಂದಿಯನ್ನು ಒಯ್ಯುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ ಎಐ-171 ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪತನ ಗೊಂಡಿದೆ. 230 ಪ್ರಯಾಣಿಕರು ಹಾಗೂ 12 ಮಂದಿ ಸಿಬ್ಬಂದಿಯಿದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕನನ್ನು ಹೊರತುಪಡಿಸಿ ಉಳಿದೆಲ್ಲರೂ ಮೃತಪಟ್ಟಿದ್ದಾರೆ.
ಈ ವಿಮಾನವು ಅಹ್ಮದಾಬಾದ್ ನಿಂದ ಲಂಡನ್ಗೆ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿದೆ. ಅಹ್ಮದಾಬಾದ್ನ ಸರ್ದಾರ್ ವಲ್ಲಭಬಾಯಿ ಪಟೇಲ್ ವಿಮಾನನಿಲ್ದಾಣದಿಂದ ಮಧ್ಯಾಹ್ನ ಸುಮಾರು 1:39ರ ವೇಳೆಗೆ ಟೇಕ್ಆಫ್ ಆದ ವಿಮಾನವು ಕೆಲವೇ ನಿಮಿಷಗಳಲ್ಲಿ ವಿಮಾನ ನಿಲ್ದಾಣದ ಹೊರವಲಯದಲ್ಲಿರುವ ಮೇಘಾನಿನಗರದಲ್ಲಿರುವ ಬಿ.ಜೆ. ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ಪತನಗೊಂಡಿದೆ. ಮೆಡಿಕಲ್ ವಿದ್ಯಾರ್ಥಿಗಳು, ವಿಮಾನದಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿ ಸೇರಿದಂತೆ ಕನಿಷ್ಠ 265 ಮಂದಿ ಮೃತಪಟ್ಟಿದ್ದಾರೆ.
ಅಹ್ಮದಾಬಾದ್ ನಲ್ಲಿ ನಡೆದ ವೈಮಾನಿಕ ದುರಂತವು ಭಾರತದಲ್ಲಿ ನಡೆದ ಭೀಕರ ವಿಮಾನ ದುರಂತಗಳನ್ನು ನೆನಪಿಸಿದೆ. ವಿಶ್ವದ ಅತ್ಯಂತ ಭೀಕರ ವಿಮಾನ ಅಪಘಾತವೊಂದು ಭಾರತದಲ್ಲಿ ನಡೆದು ನವೆಂಬರ್ 2025ಕ್ಕೆ 29 ವರ್ಷ ತುಂಬುತ್ತದೆ. ಹರಿಯಾಣದ ಹಳ್ಳಿಯಾದ ಚರ್ಖಿ ದಾದ್ರಿಯು, ಆಗಸ ಮಧ್ಯೆ ನಡೆದ ಈ ವೈಮಾನಿಕ ಅಪಘಾತಕ್ಕೆ ಸಾಕ್ಷಿಯಾಗಿತ್ತು.
ನವೆಂಬರ್ 12, 1996 ರಂದು ದಿಲ್ಲಿಯಿಂದ ಸೌದಿ ಅರೇಬಿಯಾದ ದಹ್ರಾನ್ಗೆ ತೆರಳುತ್ತಿದ್ದ ಸೌದಿ ಅರೇಬಿಯನ್ ಏರ್ಲೈನ್ಸ್ ಬೋಯಿಂಗ್ 747-100 ವಿಮಾನಕ್ಕೆ, ಕಝಕಿಸ್ತಾನದ ಶಮ್ ಕಿಂಟ್ ನಿಂದ ಭಾರತದ ದಿಲ್ಲಿಗೆ ಬರುತ್ತಿದ್ದ ಕಝಕಿಸ್ತಾನ್ ಏರ್ಲೈನ್ಸ್ ಇಲ್ಯುಶಿನ್ ಇಲ್ -76 ಟಿಡಿಗೆ ಢಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿತು. ಅಪಘಾತ ತೀವ್ರತೆಗೆ ಎರಡೂ ವಿಮಾನದಲ್ಲಿದ್ದ ಸಿಬ್ಬಂದಿ, ಪ್ರಯಾಣಿಕರು ಸೇರಿದಂತೆ 349 ಜನರು ಮೃತಪಟ್ಟಿದ್ದರು.
ಬೋಯಿಂಗ್ 747 ಮಾದರಿಯ 14 ವರ್ಷ ಹಳೆಯ ಸೌದಿ ಅರೇಬಿಯಾ ಏರ್ಲೈನ್ಸ್ SV763 ವಿಮಾನವು ದಿಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (DEL) ಮತ್ತು ಕಿಂಗ್ ಅಬ್ದುಲ್ ಅಝೀಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜಿದ್ದಾ (JED) ನಡುವಿನ ನಿಗದಿತ ಅಂತರಾಷ್ಟ್ರೀಯ ವಿಮಾನವಾಗಿದ್ದು, ಸೌದಿ ಅರೇಬಿಯಾದ ದಹ್ರಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (DHA) ಅದಕ್ಕೆ ಒಂದು ನಿಲುಗಡೆಯಿತ್ತು.
45 ವರ್ಷದ ಕ್ಯಾಪ್ಟನ್ ಖಾಲಿದ್ ಅಲ್-ಶುಬೈಲಿ ಸೌದಿ ವಿಮಾನದ ಪೈಲಟ್ ಆಗಿದ್ದರು. ಅನುಭವಿ ಪೈಲಟ್ ಆಗಿದ್ದ ಶುಬೈಲಿ ಅವರು 9,837 ಗಂಟೆಗಳ ಹಾರಾಟವನ್ನು ನಡೆಸಿದ್ದರು. ಫಸ್ಟ್ ಆಫೀಸರ್/ಕೋ ಪೈಲಟ್ ನಝೀರ್ ಖಾನ್ ಮತ್ತು ಫ್ಲೈಟ್ ಇಂಜಿನಿಯರ್ ಅಹ್ಮದ್ ಇದ್ರೀಸ್ ಅವರು ಪೈಲಟ್ ಗೆ ಸಹಕಾರ ನೀಡುತ್ತಿದ್ದರು.
ಕಝಾಕಿಸ್ತಾನ್ ಏರ್ಲೈನ್ಸ್ ಫ್ಲೈಟ್ 1907 ಕಝಾಕಿಸ್ತಾನ್ನ ಶೈಮ್ಕೆಂಟ್ ಏರ್ಪೋರ್ಟ್ (CIT)ನಿಂದ ಭಾರತದ ದಿಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (DEL) ಬರುತ್ತಿದ್ದ ಚಾರ್ಟರ್ಡ್ ವಿಮಾನವಾಗಿತ್ತು. ಈ ವಿಮಾನದಲ್ಲಿ ಕಝಕಿಸ್ತಾನದ ಶಮ್ ಕಿಂಟ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ಪ್ರವಾಸಿಗರು ಬರುತ್ತಿದ್ದರು.
ವಿಮಾನದ ಕ್ಯಾಪ್ಟನ್ 44 ವರ್ಷದ ಅಲೆಕ್ಸಾಂಡರ್ ಚೆರೆಪನೋವ್ ಅವರು 9,229 ಗಂಟೆಗಳ ಹಾರಾಟದ ಅನುಭವವಿದ್ದ ಪೈಲಟ್ ಆಗಿದ್ದರು. ಫಸ್ಟ್ ಆಫೀಸರ್/ಕೋ ಪೈಲಟ್ ಎರ್ಮೆಕ್ ಜಾಂಗಿರೋವ್, ಫ್ಲೈಟ್ ಇಂಜಿನಿಯರ್ ಅಲೆಕ್ಸಾಂಡರ್ ಚುಪ್ರೊವ್, ನ್ಯಾವಿಗೇಟರ್ ಝಹಾನ್ಬೆಕ್ ಅರಿಪ್ಬೇವ್ ಮತ್ತು ರೇಡಿಯೋ ಆಪರೇಟರ್ ಎಗೊರ್ ರೆಪ್ ಕ್ಯಾಪ್ಟನ್ ಗೆ ಸಹಕರಿಸುವ ತಂಡದಲ್ಲಿದ್ದರು.
Photo: Dmitry Avdeev | Wikimedia Commons.
►ಅಪಘಾತ ಸಂಭವಿಸಿದ್ದು ಹೇಗೆ?
ಬ್ಯೂರೋ ಆಫ್ ಏರ್ಕ್ರಾಫ್ಟ್ ಆಕ್ಸಿಡೆಂಟ್ಸ್ ಆರ್ಕೈವ್ಸ್ನ ವರದಿಯ ಪ್ರಕಾರ, ಕಝಾಕಿಸ್ತಾನ್ ಏರ್ಲೈನ್ಸ್ ಫ್ಲೈಟ್ 1907 ದಿಲ್ಲಿಯಲ್ಲಿ ಇಳಿಯುತ್ತಿತ್ತು. ದಿಲ್ಲಿ ವಿಮಾನ ನಿಲ್ದಾಣದಿಂದ 74 ಮೈಲುಗಳಷ್ಟು ದೂರದಲ್ಲಿ 23,000 ಅಡಿಗಳಿಂದ 18,000 ಅಡಿಗಳಿಗೆ ಇಳಿಯುತ್ತಿದ್ದಂತೆ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅನ್ನು ಸಂಪರ್ಕಿಸಿ ವಿಮಾನವು ಇಳಿಯಲು ಅನುಮತಿ ಕೋರಿತು. ಏರ್ ಟ್ರಾಫಿಕ್ ಕಂಟ್ರೋಲ್ ವಿಮಾನಕ್ಕೆ ಇಳಿಯಲು ಅನುಮತಿ ನೀಡಿ, ವಿಮಾನವು 15,000 ಅಡಿಗಳಿಗೆ ಇಳಿದಾಗ ಮತ್ತೆ ಸಂಪರ್ಕಿಸುವಂತೆ ಸೂಚಿಸಿದರು. ಅದೇ ಸಮಯದಲ್ಲಿ, ಸೌದಿ ಅರೇಬಿಯಾ ಏರ್ಲೈನ್ಸ್ ಫ್ಲೈಟ್ SV763 ದಿಲ್ಲಿಯಿಂದ ಜಿದ್ದಾಕ್ಕೆ ಟೇಕ್ ಆಫ್ ಆಗಿತ್ತು. ಸೌದಿ ವಿಮಾನಕ್ಕೆ 14,000 ಅಡಿಗಳಿಗೆ ಏರಲು ಅನುಮತಿ ನೀಡಲಾಯಿತು.
ತನ್ನ ನಿಯೋಜಿತ ಎತ್ತರವನ್ನು ನಿರ್ವಹಿಸಲು ವಿಫಲವಾದಾಗ ಕಝಾಕಿಸ್ತಾನ್ ಏರ್ಲೈನ್ಸ್ ವಿಮಾನವು ಎದುರು ಭಾಗದಿಂದ ಸಮೀಪಿಸುತ್ತಿದ್ದ ಕಾರಣ, ಏರ್ ಟ್ರಾಫಿಕ್ ಕಂಟ್ರೋಲ್ ಕಝಕ್ ವಿಮಾನಕ್ಕೆ 15,000 ಅಡಿಯಲ್ಲಿಯೇ ಹಾರಾಟ ನಡೆಸುವಂತೆ ಸೂಚಿಸಿ, ಕಾಯಲು ಹೇಳಿದರು. ಸ್ವಲ್ಪ ಸಮಯದ ನಂತರ, ಕಝಕ್ ವಿಮಾನವು ವಿಮಾನ ನಿಲ್ದಾಣದಿಂದ 15,000 ಅಡಿ, 46 ಮೈಲುಗಳಷ್ಟು ದೂರದಲ್ಲಿದೆ ಎಂದು ವರದಿ ಮಾಡಿತು.
ಕೂಡಲೇ ಏರ್ ಟ್ರಾಫಿಕ್ ಕಂಟ್ರೋಲರ್ "ರೋಜರ್... 150ರ ವೇಗದಲ್ಲಿಯೇ ವಿಮಾನದ ಹಾರಾಟ ಮಾಡಿ. ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸೌದಿ ಬೋಯಿಂಗ್ 747 ವಿಮಾನದ ಹಾರಾಟವನ್ನು ರಾಡಾರ್ ನಲ್ಲಿ ಗುರುತಿಸಲಾಗಿದೆ. ಆ ವಿಮಾನವು 14 ಮೈಲುಗಳ ದೂರದಲ್ಲಿದೆ. ನೋಡಿ ವರದಿ ಮಾಡಿ” ಎಂದು ಹೇಳಿತು.
ಕಝಾಕಿಸ್ತಾನ್ ಸಿಬ್ಬಂದಿ ಪರಸ್ಪರ ವಿಮಾನಗಳ ನಡುವಿನ ದೂರವನ್ನು ಪ್ರಶ್ನಿಸುವ ಮೂಲಕ ಉತ್ತರಿಸಿದರು. ಅದಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್, “ಈಗ ಕೇವಲ ಹದಿನಾಲ್ಕು ಮೈಲುಗಳು ದೂರದಲ್ಲಿದೆ ರೋಜರ್ 1907" ಎಂದು ಪ್ರತಿಕ್ರಿಯಿಸಿತು. ಆದರೆ ಕಝಕ್ ವಿಮಾನದಿಂದ ಯಾವುದೇ ಉತ್ತರ ಬಾರದಿದ್ದಾಗ, ಏರ್ ಟ್ರಾಫಿಕ್ ಕಂಟ್ರೋಲರ್ "13 ಮೈಲು ದೂರದಲ್ಲಿದೆ. 140ರ ವೇಗದಲ್ಲಿದೆ" ಎಂದು ಎಚ್ಚರಿಸಿದರು.
ಆದರೆ ಕಝಾಕಿಸ್ತಾನ್ ವಿಮಾನದಿಂದ ಏರ್ ಟ್ರಾಫಿಕ್ ಕಂಟ್ರೋಲರ್ ಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅದಾಗಲೇ ಘೋರ ದುರಂತವೊಂದು ಸಂಭವಿಸಿತ್ತು. ಇಳಿಯುತ್ತಿದ್ದ ಕಝಕಿಸ್ತಾನ ಏರ್ಲೈನ್ಸ್ ವಿಮಾನವು ದಿಲ್ಲಿ ಬಿಟ್ಟು ಆಗಸಕ್ಕೆ ಏರುತ್ತಿದ್ದ ಸೌದಿ ಏರ್ ಲೈನ್ ಗೆ ಢಿಕ್ಕಿ ಹೊಡೆದಿತ್ತು. ಸೌದಿ ವಿಮಾನವನ್ನು ಗುರುತಿಸಲು ಕಝಕಿಸ್ತಾನ ಏರ್ಲೈನ್ಸ್ ಪೈಲಟ್ ವಿಫಲವಾಗಿದ್ದರು. ಸಿಬ್ಬಂದಿ ಸಹಿತ 349 ಪ್ರಯಾಣಿಕರು ಕ್ಷಣ ಮಾತ್ರದಲ್ಲಿ ಮೃತಪಟ್ಟಿದ್ದರು.
►ವೈಮಾನಿಕ ಅಪಘಾತವನ್ನು ವರದಿ ಮಾಡಿದ ಅಮೆರಿಕ ವಾಯುಸೇನೆ
ಅದೇ ಸಂದರ್ಭ ಪಾಕಿಸ್ತಾನದ ಇಸ್ಲಾಮಾಬಾದ್ ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಅಮೆರಿಕ ವಾಯುಸೇನೆಯ ವಿಮಾನಕ್ಕೆ ವಿಮಾಗಳ ಸೌದಿ ಮತ್ತು ಕಝಕ್ ವಿಮಾಗಳ ಡಿಕ್ಕಿ ಕಂಡಿದೆ. ಈ ಘಟನೆಯನ್ನು ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ (USAF) ವಿಮಾನದ ಪೈಲಟ್ ಆಕಾಶದಿಂದ ಕಿತ್ತಳೆ ಬಣ್ಣದ ಎರಡು ಬೆಂಕಿ ಚೆಂಡುಗಳು ಉರುಳುತ್ತಿದ್ದುದನ್ನು ನಾವು ನೋಡಿದೆವು ಎಂದು ವರದಿ ಮಾಡಿದ್ದಾರೆ. ಕೂಡಲೇ ದಿಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕಿಸಿದ ಅಮೆರಿಕ ಏರ್ ಫೋರ್ಸ್ ವಿಮಾನದ ಪೈಲಟ್, “ನಾವು ನಮ್ಮ ಬಲಕ್ಕೆ ಏನನ್ನೋ ನೋಡಿದ್ದೇವೆ, ದೊಡ್ಡ ಬೆಂಕಿ ಚೆಂಡುಗಳಂತೆ ಕಾಣುತ್ತದೆ, ಏನೋ ... ದೊಡ್ಡ ಸ್ಫೋಟದಂತೆ ತೋರುತ್ತಿದೆ”, ಎಂದು ವರದಿ ಮಾಡಿದ್ದರು.
ಸ್ವಲ್ಪ ಸಮಯದ ನಂತರ, ಮತ್ತೆ ಅಮೆರಿಕ ವಾಯುಸೇನೆಯ ವಿಮಾನದ ಪೈಲಟ್, “ನಿಮ್ಮ ವಾಯುವ್ಯಕ್ಕೆ 44 ಮೈಲುಗಳಷ್ಟು ದೂರದಲ್ಲಿ, ನಮ್ಮ ಬಲಕ್ಕೆ ಎರಡು ಬೆಂಕಿ ಚೆಂಡುಗಳು ಉರಿಯುತ್ತಿರುವುದು ಕಾಣಿಸುತ್ತಿದೆ" ಎಂದು ತಿಳಿಸಿದರು.
ವರದಿ ಮಾಡುತ್ತಲೇ ಸಾಗಿದ ಅಮೆರಿಕ ವಾಯುಸೇನೆಯ ಪೈಲಟ್, “ಮುಂದೆ ಹಾದು ಹೋಗುತ್ತಿದ್ದಂತೆ ನಾವು ಮೋಡದಲ್ಲಿ ದೊಡ್ಡ ಬೆಂಕಿಯ ಉಂಡೆಯನ್ನು ನೋಡಿದೆವು. ನೆಲದ ಮೇಲೆ ಬೆಂಕಿಯ ಅವಶೇಷಗಳು ಬಿದ್ದವು”, ಎಂದು ವರದಿ ಮಾಡಿದರು.
ಇಷ್ಟು ಹೇಳುತ್ತಿದ್ದಂತೆ ದಿಲ್ಲಿಯ ಏರ್ ಟ್ರಾಫಿಕ್ ಕಂಟ್ರೋಲರ್ ಆಗಸ ಮಧ್ಯದಲ್ಲಿ ವಿಮಾನಗಳ ಡಿಕ್ಕಿ ಸಂಭವಿಸಿದೆ ಎಂದು ಅರಿತುಕೊಂಡರು. ಯಾವುದೇ ಸ್ಪಷ್ಟವಾದ ಕಾರಣವಿಲ್ಲದೆ, ಫ್ಲೈಟ್ 1907 ಅದು ಇರಬೇಕಾದ ಸ್ಥಳದಿಂದ ಕೆಳಗೆ ಇಳಿದಿತ್ತು ಮತ್ತು ಸೌದಿ ಅರೇಬಿಯನ್ ಏರ್ಲೈನ್ಸ್ ಬೋಯಿಂಗ್ 747 ಗೆ ಡಿಕ್ಕಿ ಹೊಡೆದಿತ್ತು. ಎರಡೂ ವಿಮಾನಗಳು ಬೆಂಕಿಯಲ್ಲಿ ಬೆಂದು ನೆಲಕ್ಕೆ ಬಿದ್ದವು.
►ಆಗಸದಲ್ಲೇ ವಿಮಾನಗಳ ನಡುವೆ ನಡೆದ ಅಪಘಾತದ ತನಿಖೆ ಮತ್ತು ಅಂತಿಮ ವರದಿ:
ಆಗಿನ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ರಮೇಶ್ ಚಂದ್ರ ಲಾಹೋಟಿ ನೇತೃತ್ವದ ಲಾಹೋಟಿ ಆಯೋಗವು ವಿಮಾನ ಅಪಘಾತ ತನಿಖೆಯ ಉಸ್ತುವಾರಿ ವಹಿಸಿತು. ವಿಮಾನಗಳ ಉಸ್ತುವಾರಿ ಹೊತ್ತಿದ್ದ ಏರ್ ಟ್ರಾಫಿಕ್ ಕಂಟ್ರೋಲ್ ನಿರ್ವಾಹಕರ ವಿಚಾರಣೆ ನಡೆಯಿತು. ವಿಮಾನದ ಬ್ಲ್ಯಾಕ್ ಬಾಕ್ಸ್ ಗಳು ಮತ್ತು ಕಾಕ್ಪಿಟ್ ಧ್ವನಿ ರೆಕಾರ್ಡರ್ಗಳನ್ನು ಡಿಕೋಡಿಂಗ್ ಗಾಗಿ ಮಾಸ್ಕೋ ಮತ್ತು ಲಂಡನ್ ಗೆ ಕಳುಹಿಸಲಾಯಿತು.
ಕಝಾಕಿಸ್ತಾನ್ ಏರ್ಲೈನ್ಸ್ ಫ್ಲೈಟ್ 1907 ರ ಪೈಲಟ್ಗಳು ATC ಸೂಚನೆಗಳನ್ನು ಅನುಸರಿಸಲು ವಿಫಲವಾಗಿರುವುದೇ ಅಪಘಾತಕ್ಕೆ ಕಾರಣ ಎಂದು ತನಿಖೆಯು ತೀರ್ಮಾನಿಸಿತು. ಕಝಕ್ ಪೈಲಟ್ಗಳು ಕೆಲವೊಮ್ಮೆ ಅಡಿ ಮತ್ತು ನಾಟಿಕಲ್ ಮೈಲ್ ಗಳಿಗಿಂತ ಮೆಟ್ರಿಕ್ ರೀಡ್ ಔಟ್ಗಳನ್ನು ಬಳಸುವುದರಿಂದ ತಮ್ಮ ಲೆಕ್ಕಾಚಾರಗಳನ್ನು ಗೊಂದಲಗೊಳಿಸುತ್ತಾರೆ ಭಾರತದ ಏರ್ ಟ್ರಾಫಿಕ್ ಕಂಟ್ರೋಲರ್ಗಳು ತಿಳಿಸಿದರು.
►ತನಿಖಾ ಆಯೋಗ ಬೆಟ್ಟು ಮಾಡಿದ ಪ್ರಮುಖ ಅಂಶಗಳು :
*ಕಝಕ್ ವಿಮಾನದ ಪೈಲಟ್ ಗೆ ಇಂಗ್ಲಿಷ್ ಭಾಷೆಯ ಅಲ್ಪ ಜ್ಞಾನವಿತ್ತು. ಏರ್ ಟ್ರಾಫಿಕ್ ಕಂಟ್ರೋಲರ್ ನೀಡುತ್ತಿದ್ದ ಸೂಚನೆ ಪಾಲಿಸಲು ವಿಫಲವಾಗಿದ್ದರು.
*ಕಮಾಂಡ್ ನಲ್ಲಿರುವ ಪೈಲಟ್ನಿಂದ ಕಳಪೆ ನಿರ್ವಹಣೆ ನಡೆದಿತ್ತು.
*ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಿಬ್ಬಂದಿ ಕಳಪೆ ಪ್ರದರ್ಶನ ತೋರಿದ್ದರು.
*ವಿಮಾನ ಅಪಾಯಕ್ಕೆ ಸಿಲುಕಿದ್ದರೂ ಸಿಬ್ಬಂದಿಯ ಯಾವುದೇ ಸದಸ್ಯರಿಂದ ಮೇ ಡೇ ಕರೆಗಳು ಬಂದಿರಲಿಲ್ಲ.
ಆಗಸದಲ್ಲಿ ನಡೆದ ಈ ವಿಮಾನ ಅಪಘಾತದ ನಂತರ, ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(DGCA)ವು ಭಾರತದ ಒಳಗೆ ಮತ್ತು ಹೊರಗೆ ಹಾರುವ ಎಲ್ಲಾ ವಿಮಾನಗಳು ವಾಯುಗಾಮಿ ಘರ್ಷಣೆ ತಪ್ಪಿಸುವ ವ್ಯವಸ್ಥೆ (Airborne Collision Avoidance System) ಯನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿತು.
ಸೌಜನ್ಯ: simpleflying.com







