ಒಡಿಶಾ | ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ; ಕನಿಷ್ಠ ಮೂವರು ಮೃತ್ಯು , 10 ಜನರಿಗೆ ಗಾಯ

PC | PTI
ಹೊಸದಿಲ್ಲಿ: ಒಡಿಶಾದ ಪುರಿಯಲ್ಲಿ ಜಗನ್ನಾಥ ರಥಯಾತ್ರೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿ, 10 ಜನರು ಗಾಯಗೊಂಡಿದ್ದಾರೆ.
ಜಗನ್ನಾಥ, ಬಲಭದ್ರ ಮತ್ತು ಶುಭದ್ರ ದೇವತೆಯ ವಿಗ್ರಹಗಳನ್ನು ಹೊತ್ತ ಮೂರು ರಥಗಳು ಯಾತ್ರೆ ಪ್ರಾರಂಭವಾದ ಶ್ರೀ ಗುಂಡಿಚ ದೇವಾಲಯದ ಬಳಿ ಇದ್ದಾಗ ಈ ಘಟನೆ ಸಂಭವಿಸಿದೆ.
ರವಿವಾರ ಬೆಳಗಿನ ಜಾವ 4.30 ರ ಸುಮಾರಿಗೆ ರಥಗಳು ಗುಂಡಿಚ ದೇವಾಲಯದಲ್ಲಿದ್ದವು ಮತ್ತು ದರ್ಶನಕ್ಕಾಗಿ ದೊಡ್ಡ ಜನಸಮೂಹ ಜಮಾಯಿಸಿತ್ತು. ಜನಸಂದಣಿ ಹೆಚ್ಚುತ್ತಿದ್ದಂತೆ, ಕೆಲವರು ಬಿದ್ದು ಕಾಲ್ತುಳಿತ ಪ್ರಾರಂಭವಾಯಿತು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು.
ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಎಂದು ಗುರುತಿಸಲಾಗಿದೆ. ಪ್ರಭಾತಿ ದಾಸ್ ಮತ್ತು ಬಸಂತಿ ಸಾಹು ಮತ್ತು ಇನ್ನೋರ್ವರು 70 ವರ್ಷದ ಪ್ರೇಮಕಾಂತ್ ಮೊಹಂತಿ ಸೇರಿದ್ದಾರೆ. ಮೂವರೂ ಖುರ್ದಾ ಜಿಲ್ಲೆಯವರು ಮತ್ತು ರಥಯಾತ್ರೆಗಾಗಿ ಪುರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಅವರು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆ ಬಳಿಕ ಸಾವಿಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸುತ್ತೇವೆ. ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ ಜನಸಂದಣಿ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿತು, ಇದು ದುರಂತಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ರಥಯಾತ್ರೆಯ ಸಮಯದಲ್ಲಿ, ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವತೆ ಶುಭದ್ರನ ವಿಗ್ರಹಗಳನ್ನು ಹೊಂದಿರುವ ಮೂರು ಭವ್ಯ ರಥಗಳನ್ನು ಭಕ್ತರ ಬೃಹತ್ ಗುಂಪು ಎಳೆಯುತ್ತದೆ. ರಥಗಳನ್ನು ಗುಂಡಿಚಾ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಜಗನ್ನಾಥ ದೇವಾಲಯಕ್ಕೆ ಹಿಂತಿರುಗುವ ಮೊದಲು ಮೂರು ದೇವರನ್ನು ಹೊತ್ತ ರಥಗಳು ಒಂದು ವಾರ ಅಲ್ಲಿಯೇ ಇರುತ್ತವೆ.







