ಗುರುಗ್ರಾಮ | ಜಪಾನ್ ಪ್ರವಾಸಿಗರಿಂದ ಲಂಚ ಸ್ವೀಕರಿಸುತ್ತಿದ್ದ ವೀಡಿಯೋ ವೈರಲ್: ಮೂವರು ಪೊಲೀಸ್ ಸಿಬ್ಬಂದಿಗಳ ಅಮಾನತು

Screengrab : kslto \ instagram.com
ಗುರುಗ್ರಾಮ: ಜಪಾನ್ ಪ್ರವಾಸಿಗರಿಂದ ಲಂಚ ಸ್ವೀಕರಿಸುತ್ತಿದ್ದ ವಿಡಿಯೊ ವೈರಲ್ ಆದ ಬೆನ್ನಿಗೇ, ಗುರುಗ್ರಾಮ ಸಂಚಾರಿ ಪೊಲೀಸ್ ಮೂವರು ಪೊಲೀಸರನ್ನು ಅಮಾನತುಗೊಳಿಸಿದೆ.
ಹೆಲ್ಮೆಟ್ ಧರಿಸದೆ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿದ್ದ ಜಪಾನ್ ಪ್ರವಾಸಿಗರೊಬ್ಬರಿಗೆ ಸಂಚಾರಿ ಪೊಲೀಸರು 1,000 ರೂ. ದಂಡ ವಿಧಿಸಿದ್ದಾರೆ. ಆದರೆ, ಈ ದಂಡಕ್ಕೆ ಅವರು ಯಾವುದೇ ರಸೀದಿ ನೀಡಿಲ್ಲ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಪ್ರಬಲ ಲಂಚದ ಪ್ರಕರಣವಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದರು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಗುರುಗ್ರಾಮ ಸಂಚಾರಿ ಪೊಲೀಸರು, “ಸಾಮಾಜಿಕ ಮಾಧ್ಯಮದಲ್ಲಿನ ವಿಡಿಯೊವೊಂದು ಸಂಚಾರಿ ಸಿಬ್ಬಂದಿಗಳ ದುರ್ನಡತೆಯನ್ನು ಬೆಳಕಿಗೆ ತಂದಿತ್ತು. ಪಾರದರ್ಶಕತೆ ಹಾಗೂ ಉತ್ತರದಾಯಿತ್ವದ ನಮ್ಮ ಬದ್ಧತೆಯ ಭಾಗವಾಗಿ ಗುರುಗ್ರಾಮ ಸಂಚಾರಿ ಉಪ ಪೊಲೀಸ್ ಆಯುಕ್ತರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಕರಣ್ ಸಿಂಗ್, ಶುಭಂ, ಭೂಪೇಂದ್ರ ಎಂಬ ಪೊಲೀಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ನಾವು ಸಾರ್ವಜನಿಕ ಸೇವೆಯಲ್ಲಿ ಉನ್ನತ ಮಾನದಂಡದ ಸಮಗ್ರತೆಯನ್ನು ಕಾಪಾಡಲು ಬದ್ಧರಾಗಿದ್ದೇವೆ. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ” ಎಂದು ಹೇಳಿದ್ದಾರೆ.
ಇಂತಹ ಘಟನೆಗಳನ್ನು ವರದಿ ಮಾಡುವಂತೆ ಗುರುಗ್ರಾಮ ಸಂಚಾರಿ ಪೊಲೀಸರು ಸಾರ್ವಜನಿಕರಿಗೆ ಮನವಿಯನ್ನೂ ಮಾಡಿದ್ದಾರೆ.
ಇತ್ತೀಚೆಗೆ ಸ್ಕೂಟರ್ ಒಂದರ ಮೇಲೆ ಹೆಲ್ಮೆಟ್ ಧರಿಸದೆ ಹಿಂಬದಿ ಸವಾರರಾಗಿ ಪ್ರಯಾಣಿಸುತ್ತಿದ್ದ ಜಪಾನ್ ಪ್ರವಾಸಿಗರೊಬ್ಬರ ಬಳಿ ಗುರುಗ್ರಾಮ ಸಂಚಾರಿ ಪೊಲೀಸ್ ಅಧಿಕಾರಿಗಳು 1,000 ರೂ.ಗೆ ಬೇಡಿಕೆ ಇಟ್ಟು, ಅದನ್ನು ಸ್ವೀಕರಿಸುತ್ತಿರುವ ವೀಡಿಯೋ ವೈರಲ್ ಆಗಿತ್ತು. ಕಾರ್ಡ್ ಮೂಲಕ ದಂಡ ಪಾವತಿಸಿಕೊಳ್ಳಲು ನಿರಾಕರಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು, ನಗದು ರೂಪದಲ್ಲಿ ದಂಡ ಪಾವತಿಸುವಂತೆ ಒತ್ತಾಯಿಸಿದ್ದರು. ಆ ದಂಡಕ್ಕೆ ಯಾವುದೇ ರಸೀದಿ ನೀಡಿರಲಿಲ್ಲ.
“ಇಲ್ಲೇ ಪಾವತಿಸಿ ಇಲ್ಲವೆ ನ್ಯಾಯಾಲಯದಲ್ಲಿ ಪಾವತಿಸಿ” ಎಂದು ಹೇಳಿದ್ದ ಆ ಅಧಿಕಾರಿ, ವೀಸಾ ಟಚ್ ಕಾರ್ಡ್ ಮೂಲಕ ದಂಡ ಪಾವತಿಯನ್ನು ನಿರಾಕರಿಸಿದ್ದರು. ನಂತರ, ಆ ಪ್ರವಾಸಿಯು 500 ರೂ. ಮುಖಬೆಲೆಯ ಎರಡು ನೋಟುಗಳನ್ನು ಆ ಪೊಲೀಸ್ ಅಧಿಕಾರಿಗೆ ನೀಡಿದ್ದರು. ಆದರೆ, ಆ ಅಧಿಕಾರಿಯ ಗಮನಕ್ಕೆ ಬಾರದಂತೆ ಇಡೀ ಘಟನೆಯನ್ನು ಮೆಟಾ ಸ್ಮಾರ್ಟ್ ಗ್ಲಾಸ್ ಗಳ ಮೂಲಕ ಕೈಟೊ ಎಂಬ ಆ ಪ್ರವಾಸಿ ಚಿತ್ರೀಕರಿಸಿಕೊಂಡಿದ್ದರು. ನನ್ನನ್ನು ವಿದೇಶಿಗ ಎಂದು ಗುರಿಯಾಗಿಸಿಕೊಳ್ಳಲಾಯಿತು ಎಂದು ಆಪಾದಿಸಿರುವ ಆ ಪ್ರವಾಸಿಗ, ಆ ಘಟನೆಯ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಿಗೇ ಆ ವಿಡಿಯೊ ವೈರಲ್ ಆಗಿತ್ತು.







