ಯುದ್ಧ ಭೂಮಿಯಲ್ಲಿ ಕೇರಳದ ವ್ಯಕ್ತಿ ಮೃತ್ಯು | ರಷ್ಯಾ ಮಿಲಿಟರಿಗೆ ಯುವಕರನ್ನು ನೇಮಿಸಿಕೊಂಡಿದ್ದ ಮೂವರ ಬಂಧನ

ಸಾಂದರ್ಭಿಕ ಚಿತ್ರ
ತ್ರಿಶೂರ್: ರಶ್ಯಾದಲ್ಲಿ ಮಿಲಿಟರಿ ಬೆಂಬಲ ಸೇವೆಗೆ ಸೇರಿದ್ದ ಕೇರಳದ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೂವರನ್ನು ಬಂಧಿಸಲಾಗಿದೆ.
ತ್ರಿಶೂರ್ ಮೂಲದ ಸಂದೀಪ್ ಥಾಮಸ್, ಸುಮೇಶ್ ಆಂಟನಿ ಮತ್ತು ಸಿಬಿ ಅವರನ್ನು ಹೆಚ್ಚಿನ ಸಂಬಳದ ಉದ್ಯೋಗದ ಭರವಸೆ ನೀಡಿ ರಷ್ಯಾಕ್ಕೆ ಯುವಕರನ್ನು ನೇಮಿಸಿಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಡಕ್ಕಂಚೇರಿ ಪೊಲೀಸರು ಈ ಮೂವರನ್ನು ವಿವರವಾದ ವಿಚಾರಣೆಯ ನಂತರ ಬಂಧಿಸಿದ್ದಾರೆ.
ರಶ್ಯದ ಮಿಲಿಟರಿ ಬೆಂಬಲ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮೃತಪಟ್ಟ ಬಿನಿಲ್ ಟಿ ಬಿ ಅವರ ಪತ್ನಿ ಜಾಯ್ಸಿ ಜಾನ್ ಮತ್ತು ಗಾಯಗೊಂಡು ಪ್ರಸ್ತುತ ಮಾಸ್ಕೋದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೈನ್ ಟಿ ಕೆ ಅವರ ತಂದೆ ಕುರಿಯನ್ ಅವರು ಸಲ್ಲಿಸಿದ ದೂರಿನ ಮೇರೆಗೆ ಈ ಬಂಧನಗಳು ನಡೆದಿವೆ.
ಆರೋಪಿಗಳ ವಿರುದ್ಧ ವಲಸೆ ಕಾಯ್ದೆ, ಮಾನವ ಕಳ್ಳಸಾಗಣೆ ಮತ್ತು ವಂಚನೆಯ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಟಿಐ ಮೆಕ್ಯಾನಿಕಲ್ ಡಿಪ್ಲೊಮಾ ಪಡೆದ ಬಿನಿಲ್ (32) ಮತ್ತು ಜೈನ್ (27) ಇಬ್ಬರೂ ಏಪ್ರಿಲ್ 4 ರಂದು ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ಗಳಾಗಿ ಕೆಲಸ ಮಾಡುವ ಭರವಸೆಯೊಂದಿಗೆ ರಷ್ಯಾಕ್ಕೆ ಪ್ರಯಾಣ ಬೆಳೆಸಿದರು. ಅವರು ರಶ್ಯಾ ತಲುಪಿದ ತಕ್ಷಣ, ಅವರ ಭಾರತೀಯ ಪಾಸ್ಪೋರ್ಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ನಂತರ ಅವರನ್ನು ರಶ್ಯಾದ ಮಿಲಿಟರಿ ಬೆಂಬಲ ಸೇವೆಯ ಭಾಗವಾಗಿ ಯುದ್ಧ ವಲಯಕ್ಕೆ ನಿಯೋಜಿಸಲಾಯಿತು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಬಿನಿಲ್ ತನ್ನ ಕುಟುಂಬಕ್ಕೆ ತಾನು ಮತ್ತು ತನ್ನ ಸ್ನೇಹಿತನನ್ನು ಯುದ್ಧ ರಂಗದಲ್ಲಿ ಮುಂಚೂಣಿಯ ಸೇವೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದರು.
ರಷ್ಯಾ-ಉಕ್ರೇನ್ ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದ ಬಿನಿಲ್ ಮತ್ತು ಅವರ ಸೋದರಸಂಬಂಧಿ ಜೈನ್ ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನಗಳು ನಡೆದಿತ್ತು. ಈ ಮಧ್ಯೆ ಜನವರಿ 13 ರಂದು ಬಿನಿಲ್ ಅವರ ಸಾವಿನ ಸುದ್ದಿ ಬಂದಿತು.







