ಜಯ್ ಶಾ ಸೋಗಿನಲ್ಲಿ ಮಣಿಪುರ ಶಾಸಕರಿಗೆ ಕೋಟ್ಯಂತರ ರೂಪಾಯಿಗೆ ಸಿಎಂ ಹುದ್ದೆ ಆಮಿಷ: ಮೂವರ ಬಂಧನ

Photo credit: NDTV
ಇಂಫಾಲ: ಹಣ ನೀಡಿದರೆ ಮುಖ್ಯಮಂತ್ರಿ ಹುದ್ದೆ ನೀಡಲಾಗುವುದು ಎಂದು ಅಮಿತ್ ಶಾ ಪುತ್ರ ಜಯ್ ಶಾರ ಸೋಗಿನಲ್ಲಿ ಹಲವು ಮಣಿಪುರ ಶಾಸಕರಿಗೆ ಭರವಸೆ ನೀಡಿದ್ದ ಆರೋಪದ ಮೇಲೆ ಇತ್ತೀಚೆಗೆ ಉತ್ತರಾಖಂಡದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅವರನ್ನು ಇಂಫಾಲಕ್ಕೆ ಕರೆ ತರಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಿದೌರಿ ಕಾಲಾ ಗ್ರಾಮದ ನಿವಾಸಿ ಉವೈಶ್ ಅಹ್ಮದ್, ಪೂರ್ವ ದಿಲ್ಲಿಯ ಘಾಝಿಪುರ್ ನ ನಿವಾಸಿಗಳಾದ ಗೌರವ್ ಪಂತ್ ಹಾಗೂ ಪ್ರಿಯಾಂಶು ಪಂತ್ ಎಂದು ಗುರುತಿಸಲಾಗಿದೆ ಎಂದು ಮಣಿಪುರ ಪೊಲೀಸರು ಹೇಳಿದ್ದಾರೆ.
ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ ನಂತರ, ಹಲವು ಮಣಿಪುರ ಶಾಸಕರಿಗೆ ಕರೆ ಮಾಡಿದ್ದ ಮೂವರು ಆರೋಪಿಗಳು ತಮ್ಮನ್ನು ಅಮಿತ್ ಶಾರ ಪುತ್ರ ಜಯ್ ಶಾ ಎಂದು ಗುರುತಿಸಿಕೊಂಡು, 4 ಕೋಟಿ ರೂ. ನೀಡಿದರೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಪೊಲೀಸರು, “ಇಂಫಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಎಫ್ಐಆರ್ ಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಇಂದು ಬೆಳಗ್ಗೆ ಮೂವರನ್ನು ಉತ್ತರಾಖಂಡದಲ್ಲಿ ಬಂಧಿಸಿರುವ ಮಣಿಪುರ ಪೊಲೀಸರು, ಅವರನ್ನು ಇಂಫಾಲಕ್ಕೆ ಕರೆ ತಂದಿದ್ದಾರೆ” ಎಂದು ತಿಳಿಸಿದ್ದಾರೆ.
ಈಶಾನ್ಯ ರಾಜ್ಯವಾದ ಮಣಿಪುರದ ಮುಖ್ಯಮಂತ್ರಿ ಹುದ್ದೆಗೆ ಎನ್.ಬಿರೇನ್ ಸಿಂಗ್ ರಾಜೀನಾಮೆ ಸಲ್ಲಿಸಿದ ನಂತರ, ಫೆಬ್ರವರಿ ತಿಂಗಳಲ್ಲಿ ಹಲವು ಮಣಿಪುರ ಶಾಸಕರಿಗೆ ಈ ಆರೋಪಿಗಳು ಫೋನ್ ಕರೆ ಮಾಡಿದ್ದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
“ಕೇಂದ್ರ ಗೃಹ ಸಚಿವ ಅಮಿತ್ ಶಾರ ಪುತ್ರ ಜಯ್ ಶಾರ ಸೋಗಿನಲ್ಲಿ ಶಾಸಕರಿಗೆ ಕರೆ ಮಾಡಿದ್ದ ಆರೋಪಿಗಳು, ಬೃಹತ್ ಮೊತ್ತ ನೀಡಿದರೆ, ನಿಮ್ಮನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದರು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫೆಬ್ರವರಿ 13ರಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಂತರ, ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿದ್ದು, 2017ರವರೆಗೆ ಆಡಳಿತಾವಧಿ ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗಿದೆ.