ಇಂಡೋನೇಷ್ಯಾದಲ್ಲಿ ಮೂವರು ಭಾರತೀಯರಿಗೆ ಮರಣದಂಡನೆ ಶಿಕ್ಷೆ
ಕ್ರಮ ಕೈಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿದ ದಿಲ್ಲಿ ಹೈಕೋರ್ಟ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಇಂಡೋನೇಷ್ಯಾ ನ್ಯಾಯಾಲಯವೊಂದರಿಂದ ಮರಣ ದಂಡನೆಗೆ ಗುರಿಯಾಗಿರುವ ಮೂವರು ಭಾರತೀಯ ಪ್ರಜೆಗಳ ಪರ ಸೂಕ್ತ ಕಾನೂನು ಮನವಿ ಸಲ್ಲಿಕೆ ಹಾಗೂ ನೆರವು ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಇಂಡೋನೇಷ್ಯಾದಲ್ಲಿನ ಭಾರತೀಯ ದೂತಾವಾಸ ಕಚೇರಿಗೆ ಶುಕ್ರವಾರ ದಿಲ್ಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಪರಾಧಿಗಳೆಂದು ಘೋಷಿತರಾಗಿರುವ ವ್ಯಕ್ತಿಗಳು ಹಾಗೂ ಭಾರತದಲ್ಲಿನ ಅವರ ಕುಟುಂಬಗಳ ನಡುವೆ ಸಂಪರ್ಕ ಸೌಲಭ್ಯ ಕಲ್ಪಿಸಲು ನೆರವನ್ನು ಒದಗಿಸಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ಮಾದಕ ದ್ರವ್ಯ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂಡೋನೇಷ್ಯಾದ ತಾಂಜುಂಗ್ ಬಲಾಯಿ ಕರಿಮುನ್ ಜಿಲ್ಲಾ ನ್ಯಾಯಾಲಯವು ಎಪ್ರಿಲ್ 25, 2025ರಂದು ಭಾರತೀಯ ಪ್ರಜೆಗಳಾದ ರಾಜು ಮುತ್ತುಕುಮಾರನ್, ಸೆಲ್ವದುರೈ ದಿನಕರನ್ ಹಾಗೂ ಗೋವಿಂದಸಾಮಿ ವಿಮಲ್ಕಂದನ್ ಎಂಬವರಿಗೆ ಮರಣ ದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ, ಅವರ ಮೂವರು ಪತ್ನಿಯರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ಇಂಡೋನೇಷ್ಯಾ ಶಿಪ್ಯಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಪತಿಯಂದಿರು ನಮ್ಮ ಕುಟುಂಬಗಳ ಏಕೈಕ ಅಧಾರ ಸ್ತಂಭವಾಗಿದ್ದು, ಹಣಕಾಸಿನ ಕೊರತೆಯಿಂದಾಗಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಚಿನ್ ದತ್ತ, ಯಾವುದಾದರೂ ಸೂಕ್ತ ಅಂತಾರಾಷ್ಟ್ರೀಯ ಒಡಂಬಡಿಕೆಗಳು ಅಥವಾ ದ್ವಿಪಕ್ಷೀಯ ಒಪ್ಪಂದಗಳಡಿ ಭಾರತೀಯ ಪ್ರಜೆಗಳ ಹಿತಾಸಕ್ತಿಯನ್ನು ರಕ್ಷಿಸಲು ಇಂಡೋನೇಷ್ಯಾ ಸರಕಾರದೊಂದಿಗೆ ರಾಜತಾಂತ್ರಿಕ ಮಾತುಕತೆಗಳಿಗೆ ಮುಂದಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿದ್ದಾರೆ.
ಅರ್ಜಿಯ ವಿಚಾರಣೆಯನ್ನು ಮೇ. 6, 2025ಕ್ಕೆ ಮುಂದೂಡಲಾಗಿದೆ.







