ತಮಿಳುನಾಡು | ಬಿಜೆಪಿ ಮೈತ್ರಿಕೂಟ ತೊರೆದ ಮೂರು ಬಾರಿಯ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ

ಒ.ಪನ್ನೀರ್ ಸೆಲ್ವಂ| PTI
ಚೆನ್ನೈ: ತಮಿಳುನಾಡಿನ ಮೂರು ಬಾರಿಯ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ತೊರೆದಿದ್ದಾರೆ. ಪ್ರಭಾವಿ ತೇವರ್ ಸಮುದಾಯದ ನಾಯಕರಾದ ಅವರು ಎಐಎಡಿಎಂಕೆ ನಿಷ್ಠ ಕಾರ್ಯಕರ್ತರನ್ನು ಎನ್ಡಿಎ ಮೈತ್ರಿಕೂಟದಿಂದ ಹೊರ ಕರೆದುಕೊಂಡು ಹೋಗಿರುವುದರಿಂದ, ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಭಾರಿ ಹಿನ್ನಡೆಯುಂಟಾಗಿದೆ.
ಈ ವಾರದ ಆರಂಭದಲ್ಲಿ ದಿಲ್ಲಿಗೆ ಭೇಟಿ ನೀಡಿದ್ದಾಗ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ನಿಯೋಗದಿಂದ ತಮ್ಮನ್ನು ಹೊರಗಿಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ. ತಮಿಳುನಾಡಿಗೆ ಅಮಿತ್ ಶಾ ಭೇಟಿ ನೀಡಿದ್ದಾಗಲೂ ಅವರನ್ನು ಅತಿಥಿಗಳ ಪಟ್ಟಿಯಿಂದ ಹೊರಗಿಡಲಾಗಿತ್ತು ಎಂದು ವರದಿಯಾಗಿದೆ.
ಬಿಜೆಪಿ ನೇತೃತ್ವದ ಮೈತ್ರಿಕೂಟದಿಂದ ಒ.ಪನ್ನೀರ್ ಸೆಲ್ವಂ ನಿರ್ಗಮಿಸಿರುವುದನ್ನು ಅವರ ನಿಷ್ಠ ಅನುಯಾಯಿ ಪನ್ರುತಿ ರಾಮಚಂದ್ರನ್ ಕೂಡಾ ದೃಢಪಡಿಸಿದ್ದಾರೆ. “ಇದಕ್ಕೆ ಕಾರಣವೇನು ಎಂಬ ಸಂಗತಿ ಬಹಿರಂಗವಾಗಿ ಎಲ್ಲರಿಗೂ ತಿಳಿದಿದೆ” ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರ ಭವಿಷ್ಯದ ಯೋಜನೆಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ ರಾಮಚಂದ್ರನ್, “ಭವಿಷ್ಯದಲ್ಲಿ ಜನರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಸರಿಯಾದ ಮೈತ್ರಿಯು ಏರ್ಪಡಲಿದೆ” ಎಂದು ಘೋಷಿಸಿದ್ದಾರೆ.
ಸದ್ಯದ ಮಟ್ಟಿಗೆ 2026ರ ವಿಧಾನಸಭಾ ಚುನಾವಣೆಗೂ ಮುನ್ನ ಒ.ಪನ್ನೀರ್ ಸೆಲ್ವಂ ಅವರು ರಾಜ್ಯಾದ್ಯಂತ ಸಂಚರಿಸಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಒ.ಪನ್ನೀರ್ ಸೆಲ್ವಂ ಆಡಳಿತಾರೂಢ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ವದಂತಿಗಳಿದ್ದರೂ, ಅವರನ್ನು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರ ವಾರಸುದಾರ ಎಂದು ಎಐಎಡಿಎಂಕೆ ಕಾರ್ಯಕರ್ತರು ಪರಿಗಣಿಸಿರುವುದರಿಂದ, ಅವರ ಇಂತಹ ನಡೆ ಪಕ್ಷದ ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿಸಬಹುದು ಎಂದೂ ಹೇಳಲಾಗುತ್ತಿದೆ. ಹೀಗಾಗಿ, ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಹೀಗಿದ್ದೂ, ಅವರು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದೊಂದಿಗೆ ಮೈತ್ರಿಗೆ ಪ್ರಯತ್ನಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ರಾಜ್ಯದ ಜನಸಂಖ್ಯೆಯಲ್ಲಿ ಶೇ. 12ರಷ್ಟಿರುವ ತೇವರ್ ಅಥವಾ ಮುಕ್ಕುಲತೊರ್ ಸಮುದಾಯದ ಪ್ರಭಾವಿ ನಾಯಕರಾದ, ಥೇಣಿ ಜಿಲ್ಲೆಯ ಬೋದಿನಾಯಕ್ಕನೂರ್ ವಿಧಾನಸಭಾ ಕ್ಷೇತ್ರದ ಮೂರು ಬಾರಿಯ ಶಾಸಕರಾದ ಒ.ಪನ್ನೀರ್ ಸೆಲ್ವಂ, ಈ ಸಮುದಾಯದಲ್ಲಿ ಖ್ಯಾತನಾಮರಾಗಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲಿ ತೇವರ್ ಸಮುದಾಯದ ಶೇ. 55ರಷ್ಟು ಮತಗಳು ಎಐಎಡಿಎಂಕೆ ಪಾಲಾಗಿದ್ದವು. ಹೀಗಿದ್ದೂ, ಆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರ ನೇತೃತ್ವದ ಎಐಎಡಿಎಂಕೆ ಪಕ್ಷ, ಕೇವಲ 75 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು (2016ರಲ್ಲಿ 136 ಸ್ಥಾನಗಳು). ಇದೇ ವೇಳೆ 2016ರಲ್ಲಿ 98 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಡಿಎಂಕೆ, 2021ರಲ್ಲಿ 159 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು.
2021ರ ಚುನಾವಣೆಯಲ್ಲಿ ಗೌಂಡರ್ ಪ್ರಾಬಲ್ಯದ ಪಶ್ಚಿಮ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೂ, ದಕ್ಷಿಣ ತಮಿಳುನಾಡಿನ ಗಮನಾರ್ಹ 15 ಸ್ಥಾನಗಳ ಗೆಲುವಿನಲ್ಲಿ ತೇವರ್ ಸಮುದಾಯ ಪ್ರಮುಖ ಪಾತ್ರ ವಹಿಸಿತ್ತು.
ಒ.ಪನ್ನೀರ್ ಸೆಲ್ವಂ ಅವರನ್ನು ಮೈತ್ರಿಕೂಟದಿಂದ ಕಳೆದುಕೊಂಡಿರುವ ಬಿಜೆಪಿಯ ಪಾಲಿಗೆ 2026ರ ವಿಧಾನಸಭಾ ಚುನಾವಣೆ ಗೆಲುವು ಕ್ಲಿಷ್ಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಒ.ಪನ್ನೀರ್ ಸೆಲ್ವಂ ಅವರೇನಾದರೂ ಏಕಾಂಗಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ದಕ್ಷಿಣ ತಮಿಳುನಾಡಿನಲ್ಲಿ ತೇವರ್ ಸಮುದಾಯದ ಮತ ವಿಭಜನೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಸಾಂಪ್ರದಾಯಿಕವಾಗಿ ಎಐಎಡಿಎಂಕೆ ಪಕ್ಷಕ್ಕೆ ಮತ ಚಲಾಯಿಸುತ್ತಾ ಬರುತ್ತಿರುವ ಇತರ ಸಮುದಾಯಗಳ ಮತವೂ ವಿಭಜನೆಯಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ ಬಿಜೆಪಿ ನೇತೃತ್ವದ ಮೈತ್ರಿಕೂಟದಿಂದ ಒ.ಪನ್ನೀರ್ ಸೆಲ್ವಂ ನಿರ್ಗಮಿಸಿರುವುದು, ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದ ಬಿಜೆಪಿ ಪಾಲಿಗೆ ಭಾರಿ ಹಿನ್ನಡೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಸೌಜನ್ಯ: ndtv.com







