ಕೇರಳ | ತಾಯಿಯಿಂದಲೇ ಬಾಲಕಿಯ ಕೊಲೆ ಪ್ರಕರಣಕ್ಕೆ ತಿರುವು: ಮರಣೋತ್ತರ ಪರೀಕ್ಷೆ ವರದಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬಯಲು !
ಬಾಲಕಿಯ ಚಿಕ್ಕಪ್ಪನನ್ನು ಬಂಧಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ
ಎರ್ನಾಕುಲಂ : ಕೇರಳದ ಎರ್ನಾಕುಲಂನಲ್ಲಿ ತಾಯಿಯಿಂದಲೇ ಮೂರರ ಹರೆಯದ ಬಾಲಕಿಯ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡು ಬಂದಿದೆ ಎಂದು thehindu ವರದಿ ಮಾಡಿದೆ.
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪುಥೆನ್ ಕ್ರೂಝ್ ಪೊಲೀಸರು ಬುಧವಾರ ರಾತ್ರಿ ಮಗುವಿನ ತಂದೆಯ ಕಿರಿಯ ಸಹೋದರನನ್ನು ಬಂಧಿಸಿದ್ದಾರೆ.
ʼಆರೋಪಿ ನಮ್ಮ ವಶದಲ್ಲಿದ್ದಾನೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ನಾವು ಈಗಾಗಲೇ ಪ್ರತ್ಯೇಕ ಪ್ರಕರಣ ದಾಖಲಿಸಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿಯು ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಸೂಚಿಸುತ್ತದೆ ಎಂದು ಎರ್ನಾಕುಲಂ ಗ್ರಾಮೀಣ ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಆರೋಪದಲ್ಲಿ ಬಾಲಕಿಯ ತಾಯಿಯನ್ನು ಬಂಧಿಸಿ ಅಲುವಾ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಘಟನೆ ನಾಟಕೀಯ ತಿರುವು ಪಡೆದಿದೆ. ಕಲಾಮಸ್ಸೆರಿಯ ಸರಕಾರಿ ವೈದ್ಯಕೀಯ ಕಾಲೇಜಿನಿಂದ ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬಂದ ತಕ್ಷಣ ಆಕೆಯನ್ನು ವಾಪಾಸ್ಸು ಕರೆತರುವಂತೆ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಸೂಚಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಗು ಆರೋಪಿಯ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿತ್ತು. ಮಗು ಆರೋಪಿಯ ಮನೆಗೆ ಹೋದಾಗ ಆತ ಹಲವಾರು ಬಾರಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.
ಬಾಲಕಿಯ ಮೇಲೆ ದೌರ್ಜನ್ಯ ಎಸಗಿರುವುದು ತಾಯಿಗೆ ತಿಳಿದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಗು ನಾಪತ್ತೆ ಬಗ್ಗೆ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆ ಅದರ ಬಗ್ಗೆ ಏನನ್ನೂ ಹೇಳಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಿರುವಣಿಯೂರ್ ಪಂಚಾಯತ್ ನಿಂದ ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕಿಯ ಮೃತದೇಹ ಮಂಗಳವಾರ ಬೆಳಗ್ಗೆ ಚಾಲುಕ್ಕುಡಿ ನದಿಯಲ್ಲಿ ಪತ್ತೆಯಾಗಿದೆ. ಆಕೆಯ ತಾಯಿ ಸಂಧ್ಯಾ ಎಂಬಾಕೆಯೇ ಆಕೆಯನ್ನು ನದಿಗೆ ಎಸೆದಿದ್ದಳು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಆಕೆಯನ್ನು ವಶಕ್ಕೆ ಪಡೆದಿರುವ ಚೆಂಗಮನಾಡ್ ಠಾಣೆ ಪೊಲೀಸರು ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.







