ಮಲಗುಂಡಿ ಸ್ವಚ್ಛತೆ ವೇಳೆ ಮೃತಪಟ್ಟ ಕಾರ್ಮಿಕನ ಪತ್ನಿಗೆ 30 ಲಕ್ಷ ರೂ. ಪರಿಹಾರ ನೀಡಲು ದಿಲ್ಲಿ ಹೈಕೋರ್ಟ್ ಆದೇಶ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮಲಗುಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಉಸಿರುಕಟ್ಟಿ ಸಾವನ್ನಪ್ಪಿದ ಪೌರ ಕಾರ್ಮಿಕನ ಪತ್ನಿಗೆ 30 ಲಕ್ಷ ರೂ. ಪರಿಹಾರ ನೀಡುವಂತೆ ದಿಲ್ಲಿ ಹೈಕೋರ್ಟ್ ನಗರಾಡಳಿತಕ್ಕೆ ನಿರ್ದೇಶಿಸಿದೆ.
ಮಲಗುಂಡಿ ಸ್ವಚ್ಛಗೊಳಿಸುತ್ತಿರುವ ಸಂದರ್ಭ ಮೃತಪಟ್ಟವರ ಅವಲಂಬಿತರಿಗೆ ನೀಡಬೇಕಾದ ಪರಿಹಾರವನ್ನು 10 ರೂ.ನಿಂದ 30 ಲಕ್ಷ ರೂ.ಗೆ ಏರಿಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರಕಾರ ತನಗೆ ನೀಡಲಾದ ಪರಿಹಾರವನ್ನು ಹೆಚ್ಚಿಸುವಂತೆ ಕೋರಿ ಮೃತ ಪೌರ ಕಾರ್ಮಿಕನ ಪತ್ನಿಯ ಮನವಿಯನ್ನು ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಹ್ಮಣ್ಯ ಪ್ರಸಾದ್ ಅವರು ಅಂಗೀಕರಿಸಿದರು.
ಸುಪ್ರೀಂ ಕೋರ್ಟಿನ ತೀರ್ಪು ಪ್ರಸಕ್ತ ಪ್ರಕರಣಕ್ಕೆ ಕೂಡ ಅನ್ವಯಿಸುತ್ತದೆ ಎಂದು ನ್ಯಾಯಾಧೀಶರು ಹೇಳಿದರು. ಪ್ರಸಕ್ತ ಪ್ರಕರಣದಲ್ಲಿ ಕೂಡ ಸುಪ್ರೀಂ ಕೋರ್ಟಿನ ತೀರ್ಪನ್ನು ಅನ್ವಯಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವುದರೊಂದಿಗೆ ನ್ಯಾಯಾಧೀಶರು ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿದರು.
ಸುಪ್ರೀಂ ಕೋರ್ಟಿನ ಆದೇಶ ಈ ಪ್ರಕರಣದ ವಾಸ್ತವಾಂಶಗಳಿಗೂ ಅನ್ವಯವಾಗಲಿದೆ ಹಾಗೂ ಇಂದಿನಿಂದ ಎರಡು ತಿಂಗಳ ಅವಧಿಯಲ್ಲಿ ಜಾರಿಗೆ ಬರಲಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ತನಗೆ ಈಗಾಗಲೇ 10 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದನ್ನು 30 ಲಕ್ಷ ರೂ.ಗೆ ಏರಿಸುವಂತೆ ದೂರುದಾರರು ಮನವಿ ಮಾಡಿದ್ದರು.
ತನಗೆ ಉದ್ಯೋಗ, ತನ್ನ ಮಕ್ಕಳಿಗೆ ಶಿಕ್ಷಣ ಹಾಗೂ ಕೌಶಲ ತರಬೇತಿ ಸೇರಿದಂತೆ ಸಂಪೂರ್ಣ ಪುನರ್ವಸತಿ ಒದಗಿಸುವಂತೆ ನಗರಾಡಳಿತಕ್ಕೆ ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದರು.