ಉತ್ತರ ಪ್ರದೇಶ | ದಲಿತ ಯುವಕನ ಹತ್ಯೆ; ಯುವಕನಿಗೆ ಜೀವಾವಧಿ ಶಿಕ್ಷೆ

File photo | ANI
ಗೋಂಡಾ: ದಲಿತ ಯುವಕನ ಹತ್ಯೆ ಪ್ರಕರಣದಲ್ಲಿ 30 ವರ್ಷದ ಯುವಕನಿಗೆ ಇಲ್ಲಿನ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ಘಟನೆ ಮಂಕಾಪುರ ಪ್ರದೇಶದ ಬಲ್ಲಿಪುರ ಗ್ರಾಮದಲ್ಲಿ 2020 ಆಗಸ್ಟ್ 14ರಂದು ನಡೆದಿದೆ ಎಂದು ವಿಶೇಷ ಸರಕಾರಿ ವಕೀಲ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆ) ಕೃಷ್ಣ ಪ್ರತಾಪ್ ಸಿಂಗ್ ಹಾಗೂ ಜಿಲ್ಲಾ ಸಹಾಯಕ ಸರಕಾರಿ ವಕೀಲ (ಕ್ರಿಮಿನಲ್) ಹರ್ಷವರ್ಧನ್ ಪಾಂಡೆ ಹೇಳಿದ್ದಾರೆ.
ತನ್ನ ಸಹೋದರಿಗೆ ಸುಮಿತ್ರಾ ನಂದನ್ (30) ಹಾಗೂ ಇತರ ಇಬ್ಬರು ಪದೇ ಪದೇ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ರಾಹುಲ್ (20)ನನ್ನು ಇರಿದು ಹತ್ಯೆಗೈಯಲಾಗಿತ್ತು.
ಈ ಹಿನ್ನಲೆಯಲ್ಲಿ ರಾಹುಲ್ ಅವರ ತಾಯಿ ಮೈನಾವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಂಬಂಧಿಸಿದ ಸೆಕ್ಷನ್ ಗಳ ಅಡಿಯಲ್ಲಿ ನಂದನ್, ರಾಕೇಶ್ ಚೌಹಾಣ್ ಹಾಗೂ ಅಬ್ದುಲ್ ಖಾದಿರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಾಸಿಕ್ಯೂಷನ್ ಪ್ರಕಾರ ಮೈನಾವತಿ ಅವರ ಪುತ್ರಿಗೆ ನಂದನ್ ಪದೇ ಪದೇ ಕಿರುಕುಳ ನೀಡುತ್ತಿದ್ದ. ಇದನ್ನು ರಾಹುಲ್ ವಿರೋಧಿಸಿದ. ಈ ಹಿನ್ನೆಲೆಯಲ್ಲಿ ಮೂವರು ರಾಹುಲ್ ಗೆ ಜೀವ ಬೆದರಿಕೆ ಒಡ್ಡಿದ್ದರು. ಅನಂತರ ನಂದನ್ ಚೌಹಾಣ್ ಹಾಗೂ ಖಾದಿರ್ನನ್ನು ಜೊತೆಗೆ ಸೇರಿಸಿ ರಾಹುಲ್ನನ್ನು ಹತ್ಯೆಗೈದಿದ್ದ.
ಘಟನೆ ನಡೆದ ಒಂದು ದಿನದ ಬಳಿಕ ಪೊಲೀಸರು ನಂದನ್ನನ್ನು ಬಂಧಿಸಿದ್ದರು ಹಾಗೂ ಹತ್ಯೆಗೆ ಬಳಸಿದ ಆಯಧವನ್ನು ವಶಕ್ಕೆ ತೆಗೆದುಕೊಂಡಿದ್ದರು. ತನಿಖೆ ಪೂರ್ಣಗೊಂಡ ಬಳಿಕ ಎಲ್ಲಾ ಮೂವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಶೇಷ ನ್ಯಾಯಾಧೀಶ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆ) ಸೂರ್ಯ ಪ್ರಕಾಶ್ ಸಿಂಗ್ ಶುಕ್ರವಾರ ನಂದನ್ ದೋಷಿ ಎಂದು ಪರಿಗಣಿಸಿದರು. ಆತನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 16 ಸಾವಿರ ರೂ. ದಂಡ ವಿಧಿಸಿದರು. ಒಂದು ವೇಳೆ ದಂಡ ಪಾವತಿಸದೇ ಇದ್ದರೆ, ಹೆಚ್ಚುವರಿಯಾಗಿ 9 ತಿಂಗಳು ಜೈಲುವಾಸವನ್ನು ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆಯಿಂದ ಚೌಹಣ್ ಹಾಗೂ ಖಾದಿರ್ನನ್ನು ಖುಲಾಸೆಗೊಳಿಸಿತು.