32 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಪುನಾರಂಭ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ವಾಯು ಪ್ರದೇಶ ನಿರ್ಬಂಧದಿಂದಾಗಿ ಮುಚ್ಚಿದ್ದ ಭಾರತದ ಉತ್ತರ ಹಾಗೂ ವಾಯುವ್ಯ ವಲಯಗಳಲ್ಲಿನ 32 ವಿಮಾನ ನಿಲ್ದಾಣಗಳು ಸೋಮವಾರ ಮತ್ತೆ ಕಾರ್ಯಾಚರಣೆ ಆರಂಭಿಸಿದೆ ಎಂದು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಭಾರತ, ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಬಳಿಕ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಈ ಘೋಷಣೆ ಮಾಡಿದೆ.
ಶ್ರೀನಗರ, ಚಂಡಿಗಢ, ಹಾಗೂ ಅಮೃತಸರ ವಿಮಾನ ನಿಲ್ದಾಣಗಳು ಸೇರಿದಂತೆ ಈ ವಿಮಾನ ನಿಲ್ದಾಣಗಳಲ್ಲಿ ಈಗ ನಾಗರಿಕ ವಿಮಾನಗಳ ಸಂಚಾರ ಆರಂಭವಾಗಿದೆ ಎಂದು ಅದು ತಿಳಿಸಿದೆ.
‘‘ವಿಮಾನ ಯಾನಿಗಳೇ ಗಮನಿಸಿ: 2025 ಮೇ 15ರ 5:29ರ ವರೆಗೆ 32 ವಿಮಾನ ನಿಲ್ದಾಣಗಳ ತಾತ್ಕಾಲಿಕ ಮುಚ್ಚುಗಡೆಗೆ ನೋಟಿಸು ನೀಡಲಾಗಿತ್ತು. ಈ ವಿಮಾನ ನಿಲ್ದಾಣಗಳು ಈಗ ನಾಗರಿಕ ವಿಮಾನ ಯಾನಕ್ಕೆ ಲಭ್ಯವಿದೆ’’ ಎಂದು ಅದು ಹೇಳಿದೆ.
ವಿಮಾನಗಳ ಸಂಚಾರದ ಬಗ್ಗೆ ವಿಮಾನ ಯಾನ ಸಂಸ್ಥೆಗಳೊಂದಿಗೆ ನೇರವಾಗಿ ವಿಚಾರಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ತಮ್ಮ ವೆಬ್ಸೈಟ್ ಅನ್ನು ಪರಿಶೀಲಿಸುವಂತೆ ಪ್ರಯಾಣಿಕರಿಗೆ ಎಎಐ ಸಲಹೆ ನೀಡಿದೆ.
32 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಜೈಸಲ್ಮೇರ್, ಜಾಮ್ನಗರ್, ಜೋಧಪುರ, ಆಧಂಪುರ, ಅಂಬಾಲ, ಆವಂತಿಪುರ, ಬಠಿಂಡಾ, ಭುಜ್, ಬಿಕೇನರ್, ಹಲ್ವಾರಾ, ಹಿಂಡನ್, ಜಮ್ಮು, ಕಾಂಡ್ಲಾ, ಕಾಂಗ್ರಾ (ಗಗ್ಗಾಲ್), ಕೆಶೋಡ್, ಕಿಷನ್ಗಢ, ಕುಲ್ಲು ಮನಾಲಿ (ಭುಂತರ್), ಲೇಹ್, ಲೂಧಿಯಾನ, ಮುಂಡ್ರಾ, ನಲಿಯಾ, ಪಠಾಣ್ಕೋಟ್, ಪಾಟಿಯಾಲ, ಪೋರ್ಬಂದರ್, ರಾಜ್ಕೋಟ್ (ಹಿಸ್ಸಾರ್), ಸರ್ಸಾವ, ಶಿಮ್ಲಾ, ಥೊಯ್ಸೆ ಹಾಗೂ ಉತ್ತರ್ಲಾಯ್ ಸೇರಿದೆ.
ಬಜೆಟ್ ವಿಮಾನ ಯಾನ ಸಂಸ್ಥೆಗಳಾದ ಇಂಡಿಗೋ ಹಾಗೂ ಸ್ಪೈಸ್ಜೆಟ್ ಸೇರಿದಂತೆ ಹಲವು ಪ್ರಮುಖ ವಿಮಾನ ಯಾನ ಸಂಸ್ಥೆಗಳು ಕೂಡ ಈ ವಿಮಾನ ನಿಲ್ದಾಣಗಳಲ್ಲಿ ತಮ್ಮ ಸೇವೆ ಆರಂಭವಾಗಿರುವ ಬಗ್ಗೆ ಪ್ರಕಟಣೆ ನೀಡಿವೆ.







