ಪಶ್ಚಿಮ ಬಂಗಾಳ | 34 ಲಕ್ಷ ಮಂದಿ 'ಆಧಾರ್' ಹೊಂದಿರುವರು ಮೃತಪಟ್ಟಿದ್ದಾರೆ: ಚುನಾವಣಾ ಆಯೋಗಕ್ಕೆ ತಿಳಿಸಿದ ಯುಐಡಿಎಐ

ಸಾಂದರ್ಭಿಕ ಚಿತ್ರ (PTI)
ಕೋಲ್ಕತ್ತಾ: ಜನವರಿ 2009ರಲ್ಲಿ ಆಧಾರ್ ಕಾರ್ಡ್ ಅನ್ನು ಪರಿಚಯಿಸಿದಾಗಿನಿಂದ ಇಲ್ಲಿಯವರೆಗೆ ಪಶ್ಚಿಮ ಬಂಗಾಳದಲ್ಲಿ ಸುಮಾರು 34 ಲಕ್ಷ ಮಂದಿ ಆಧಾರ್ ಕಾರ್ಡ್ ಹೊಂದಿರುವವರನ್ನು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಮಾಹಿತಿ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆಯ ಅಭಿಯಾನ ಕೈಗೊಳ್ಳುವ ಭಾಗವಾಗಿ ನಡೆಯುತ್ತಿರುವ ಎಣಿಕೆ ಕಾರ್ಯವನ್ನು ಪರಾಮರ್ಶಿಸಲು ನಡೆದ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪಶ್ಚಿಮ ಬಂಗಾಳ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ನಡುವಿನ ಸಭಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.
ಮತದಾರರ ದತ್ತಾಂಶವನ್ನು ಆಧಾರ್ ಪ್ರಾಧಿಕಾರಗಳೊಂದಿಗೆ ಪರಿಶೀಲಿಸಿ, ಏನಾದರೂ ಅಕ್ರಮಗಳಿದ್ದರೆ ಪತ್ತೆ ಹಚ್ಚಿ ಎಂದು ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ನೀಡಿದ್ದ ನಿರ್ದೇಶನದನ್ವಯ ಈ ಸಭೆ ನಡೆಯಿತು.
ಬುಧವಾರ ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು, “ಮತಪಟ್ಟಿಗಳಲ್ಲಿ ಅದೃಶ್ಯ ಮತದಾರರು, ಮೃತ ಮತದಾರರು, ಮತದಾರರ ಗೈರು ಹಾಗೂ ನಕಲಿ ಮತದಾರರಿರುವ ಕುರಿತು ಚುನಾವಣಾ ಆಯೋಗ ಅಸಂಖ್ಯಾತ ದೂರುಗಳನ್ನು ಸ್ವೀಕರಿಸಿದೆ. ಮೃತಪಟ್ಟ ನಾಗರಿಕರ ಬಗೆಗಿನ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ದತ್ತಾಂಶಗಳ ನೆರವಿನಿಂದ ಇಂತಹ ನಮೂದುಗಳನ್ನು ಪತ್ತೆ ಹಚ್ಚಲು ಹಾಗೂ ತೆಗೆದು ಹಾಕಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ” ಎಂದು ಹೇಳಿದ್ದಾರೆ.
ಪರಿಶೀಲನೆಯ ಪ್ರಕ್ರಿಯೆಯಲ್ಲಿ ನಿಖರತೆಯನ್ನು ಖಾತರಿಪಡಿಸುವಂತೆ ಹಾಗೂ ಜಾಗರೂಕವಾಗಿರುವಂತೆ ಮುಖ್ಯ ಚುನಾವಣಾ ನೋಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.







