ಬಜೆಟ್ ನಲ್ಲಿ ಕ್ರೀಡಾ ಸಚಿವಾಲಯಕ್ಕೆ 3,442.32 ಕೋಟಿ ರೂ.; ಖೇಲೋ ಇಂಡಿಯಾಕ್ಕೆ ಸಿಂಹಪಾಲು

PC : X \ @kheloindia
ಹೊಸದಿಲ್ಲಿ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕ್ರೀಡಾ ಸಚಿವಾಲಯಕ್ಕೆ 3,442.32 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ 900 ಕೋಟಿ ರೂ.ಗಳ ಸಿಂಹಪಾಲನ್ನು ಖೇಲೋ ಇಂಡಿಯಾ ಪಡೆದುಕೊಂಡಿದ್ದು, ಇದು ಹಿಂದಿನ ವಿತ್ತವರ್ಷದಲ್ಲಿಯ 880 ಕೋಟಿ ರೂ.ಗಳ ಪರಿಷ್ಕೃತ ಹಂಚಿಕೆಗಿಂತ 20 ಕೋಟಿ ರೂ.ಅಧಿಕವಾಗಿದೆ. ಖೇಲೋ ಇಂಡಿಯಾ ತಳಮಟ್ಟದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸರಕಾರದ ಪ್ರಮುಖ ಯೋಜನೆಯಾಗಿದೆ.
ಪ್ಯಾರಿಸ್ ಒಲಿಪಿಂಕ್ಸ್ ಈ ವರ್ಷದ ಆಗಸ್ಟ್ ನಲ್ಲಿ ಸಂಪನ್ನಗೊಳ್ಳಲಿದ್ದು, ಕಾಮನ್ವೆಲ್ತ್ ಕ್ರೀಡೆಗಳು ಮತ್ತು ಏಶ್ಯನ್ ಗೇಮ್ಸ್ ಗೆ ಇನ್ನೂ ಎರಡು ವರ್ಷಗಳು ಬಾಕಿಯಿರುವಂತೆ ಹಿಂದಿನ ವರ್ಷದ 3,396.96 ಕೋಟಿ ರೂ.ಗಳಿಗೆ ಹೋಲಿಸಿದರೆ ಕ್ರೀಡಾ ಸಚಿವಾಲಯದ ಈ ವರ್ಷದ ಬಜೆಟ್ ನಲ್ಲಿ 45.36 ಕೋಟಿ ರೂ.ಗಳ ಅಲ್ಪ ಏರಿಕೆಯಾಗಿದೆ.
ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್ಎಸ್ಎಫ್)ಗಳಿಗೆ 340 ಕೋಟಿ ರೂ.,ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ 822.60 ಕೋಟಿ ರೂ.,ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಸಂಸ್ಥೆ (ನಾಡಾ)ಗೆ 22.30 ಕೋಟಿ ರೂ.ಮತ್ತು ರಾಷ್ಟ್ರೀಯ ಮದ್ದು ಸೇವನೆ ಪರೀಕ್ಷಾ ಪ್ರಯೋಗಾಲಯ (ಎನ್ಡಿಟಿಎಲ್)ಕ್ಕೆ 22 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗಿದೆ.





