ಜಮ್ಮು ಕಾಶ್ಮೀರದ ರಾಂಬನ್ ನಲ್ಲಿ ಐದು ಬಸ್ಗಳು ಢಿಕ್ಕಿ: ಕನಿಷ್ಠ 36 ಅಮರನಾಥ ಯಾತ್ರಿಕರಿಗೆ ಗಾಯ

Credit: X/@PTI_News
ರಾಂಬನ್/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಐದು ಬಸ್ಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 36 ಅಮರನಾಥ ಯಾತ್ರಿಕರಿಗೆ ಗಾಯಗಳಾಗಿದೆ.
ಈ ಬಸ್ ಗಳು ಜಮ್ಮುವಿನ ಭಗವತಿ ನಗರದಿಂದ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಬೇಸ್ ಕ್ಯಾಂಪ್ ಗೆ ತೆರಳುತ್ತಿದ್ದ ಬೆಂಗಾವಲು ಪಡೆಯಲ್ಲಿದ್ದವು. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಚಂದರ್ಕೂಟ್ ಬಳಿ ಬೆಳಿಗ್ಗೆ ಸುಮಾರು 8 ಗಂಟೆಯ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
"ಪಹಲ್ಗಾಮ್ ಬೆಂಗಾವಲಿನ ಕೊನೆಯ ಬಸ್ನ ಬ್ರೇಕ್ ವಿಫಲವಾದ ಪರಿಣಾಮ ನಿಯಂತ್ರಣ ತಪ್ಪಿ, ಲ್ಯಾಂಗರ್ ಬಳಿ ನಿಲ್ಲಿಸಿದ್ದ ವಾಹನಗಳಿಗೆ ಢಿಕ್ಕಿ ಹೊಡೆದು ನಾಲ್ಕು ಬಸ್ ಗಳಿಗೆ ಹಾನಿಯಾಗಿದೆ. ಅಪಘಾತದಲ್ಲಿ 36 ಯಾತ್ರಿಕರಿಗೆ ಗಾಯಗಳಾಗಿದೆ," ಎಂದು ರಾಂಬನ್ ಉಪ ಆಯುಕ್ತ ಮುಹಮ್ಮದ್ ಅಲಿಯಾಸ್ ಖಾನ್ ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ತಕ್ಷಣವೇ ಸ್ಥಳದಲ್ಲಿದ್ದ ಅಧಿಕಾರಿಗಳು ಗಾಯಾಳುಗಳನ್ನು ರಾಂಬನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲದ ಕಾರಣ ಯಾತ್ರಿಕರನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದೆ.
ಅಪಘಾತದ ಬಳಿಕ ಸ್ಥಳೀಯ ಆಡಳಿತದ ತ್ವರಿತ ಕ್ರಮ ಕೈಗೊಂಡಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಯಾತ್ರಿಕರ ಸುರಕ್ಷತೆ ಮತ್ತು ಯಾತ್ರೆಯ ಸುಗಮ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
"ಅಪಘಾತದಿಂದ ಹಾನಿಗೊಳಗಾದ ಬಸ್ಗಳನ್ನು ಬದಲಾಯಿಸಲಾಗಿದ್ದು, ಬೆಂಗಾವಲು ಪಡೆ ತನ್ನ ಮುಂದಿನ ಪ್ರಯಾಣವನ್ನು ಪುನರಾರಂಭಿಸಿದೆ," ಎಂದು ಉಪ ಆಯುಕ್ತರು ತಿಳಿಸಿದ್ದಾರೆ.
ಇದರೊಂದಿಗೆ, ಶನಿವಾರ 6,979 ಯಾತ್ರಿಕರ ನಾಲ್ಕನೇ ಬ್ಯಾಚ್ ಜಮ್ಮುವಿನ ಭಗವತಿ ನಗರದಲ್ಲಿರುವ ಮೂಲ ಶಿಬಿರದಿಂದ ಅಮರನಾಥ ಯಾತ್ರೆಗೆ ಹೊರಟಿದೆ. 4,226 ಯಾತ್ರಿಕರು 161 ವಾಹನಗಳಲ್ಲಿ ಪಹಲ್ಗಾಮ್ ಮಾರ್ಗವಾಗಿ ಪ್ರಯಾಣ ಆರಂಭಿಸಿದ್ದು, 2,753 ಯಾತ್ರಿಕರು 151 ವಾಹನಗಳಲ್ಲಿ ಬಾಲ್ಟಾಲ್ ಮಾರ್ಗದ ಮೂಲಕ ಯಾತ್ರೆಗೆ ಹೊರಟಿದ್ದಾರೆ.