ನಾಳೆ ನಡೆಯಲಿರುವ ಎನ್ಡಿಎ ಸಭೆಯಲ್ಲಿ 38 ಮಿತ್ರ ಪಕ್ಷಗಳು ಭಾಗಿ: ಜೆಪಿ ನಡ್ಡಾ
ಜೆಪಿ ನಡ್ಡಾ | Photo : PTI
ಹೊಸದಿಲ್ಲಿ: ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯನ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸೋಮವಾರ ದಿಲ್ಲಿಯಲ್ಲಿ ಎನ್ಡಿಎ ಸಭೆಯಲ್ಲಿ 38 ಪಕ್ಷಗಳು ಭಾಗವಹಿಸಲಿವೆ ಎಂದು ಹೇಳಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ಪ್ರತಿ ಪಕ್ಷಗಳು ಬೆಂಗಳೂರಿನಲ್ಲಿ ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎನ್ಡಿಎ ಈ ಸಭೆ ನಡೆಸುತ್ತಿದೆ.
ನಾಳೆ ಎನ್ಡಿಎ ಸಭೆ ನಡೆಯಲಿದ್ದು, ಸಭೆಯಲ್ಲಿ 38 ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಪ್ರಧಾನಿ ಮೋದಿ ಮೇಲೆ ದೇಶದ ಜನ ನಂಬಿಕೆಯಿಟ್ಟಿದ್ದಾರೆ. ಮೋದಿ ನೇತೃತ್ವದಲ್ಲಿ ಒಂಬತ್ತು ವರ್ಷಗಳ ಆಡಳಿತ ಯಶಸ್ವಿಯಾಗಿದ್ದು, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಒಂಬತ್ತು ವರ್ಷಗಳಲ್ಲಿ ಮೋದಿಯವರ ಬಲಿಷ್ಠ ನಾಯಕತ್ವವನ್ನು ನೋಡಿದ್ದೇವೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಡೆದ ಅಭಿವೃದ್ಧಿ, ಯೋಜನೆಗಳು, ನೀತಿಗಳ ಬಗ್ಗೆ ಆಸಕ್ತಿ ತೋರಿರುವ ಪಕ್ಷಗಳು ಎನ್ಡಿಎ ಮೈತ್ರಿ ಸೇರಲು ಉತ್ಸುಕವಾಗಿವೆ ಎಂದು ಅವರು ಹೇಳಿದ್ದಾರೆ.
ನಮ್ಮದು ಅಭಿವೃದ್ಧಿಯ ಅಜೆಂಡಾ, ವಿಪಕ್ಷಗಳದ್ದು ನರೇಂದ್ರ ಮೋದಿಯನ್ನು ಸೋಲಿಸುವ ಅಜೆಂಡಾ ಎಂದು ಹೇಳಿದ ನಡ್ಡಾ, ವಿರೋಧ ಪಕ್ಷಗಳು ಯಾರನ್ನು ನಾಯಕನನ್ನಾಗಿ ಮಾಡುತ್ತವೆ ಎಂಬುದೇ ಅವರಿಗೆ ಸಮಸ್ಯೆಯಾಗಿದೆ. ಅವರಲ್ಲಿ ನಾಯಕರು, ಅಥವಾ ದೂರದೃಷ್ಟಿ, ಅಥವಾ ಯಾವುದೇ ಕ್ರಮ ಕೈಗೊಳ್ಳುವ ಸಾಮರ್ಥ್ಯ ಇಲ್ಲ ಎಂದು ಹೇಳಿದ್ದಾರೆ.
ಈ ನಡುವೆ, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೋಮವಾರ ಘೋಷಿಸಿದ್ದಾರೆ.
ದಿಲ್ಲಿಯಲ್ಲಿ ಚಿರಾಗ್ ಪಾಸ್ವಾನ್ ಅವರನ್ನು ಭೇಟಿ ಮಾಡಿದ ನಂತರ, ಜೆಪಿ ನಡ್ಡಾ ಅವರನ್ನು "ಎನ್ಡಿಎ ಕುಟುಂಬ"ಕ್ಕೆ ಸ್ವಾಗತಿಸಿದ್ದಾರೆ.
ಅದಕ್ಕೂ ಮುನ್ನಾ ದಿನ, ಪಾಸ್ವಾನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ 2024 ರ ಚುನಾವಣೆಗೆ ಬಿಹಾರದಲ್ಲಿ ತಮ್ಮ ಪಕ್ಷದ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದರು.