ಉತ್ತರ ಪ್ರದೇಶ | ಕಾಲೇಜಿನಲ್ಲಿ ಭೀಕರ ದುರಂತ: ಪಟಾಕಿ ಸ್ಫೋಟಕ್ಕೆ ಕನಿಷ್ಠ ನಾಲ್ವರು ಬಲಿ

Photo: India Today
ಹೊಸದಿಲ್ಲಿ : ಉತ್ತರಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುಧವಾರ ಸಂಭವಿಸಿದ ಭೀಕರ ಪಟಾಕಿ ದುರಂತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.
ಚಿತ್ರಕೂಟ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ‘ಬುಂದೇಲ್ಖಂಡ ಗೌರವ ಮಹೋತ್ಸವ’ ಕಾರ್ಯಕ್ರಮದಲ್ಲಿ ಈ ದುರ್ಘಟನೆ ನಡೆದಿದೆ. ಪಟಾಕಿ ಸ್ಫೋಟದಲ್ಲಿ ಮೃತಪಟ್ಟವರನ್ನು ಪ್ರಭಾತ್, ಯಶ್, ಪರಸ್ ಹಾಗೂ ಮೋಹಿತ್ ಎಂದು ಗುರುತಿಸಲಾಗಿದೆ.
ಕಾರ್ಯಕ್ರಮದ ಎರಡನೇ ದಿನವಾದ ಬುಧವಾರ ಪಟಾಕಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು ಮತ್ತು ಇದಕ್ಕಾಗಿ ಪಟಾಕಿಗಳನ್ನು ವೇದಿಕೆಯ ಹಿಂಭಾಗದಲ್ಲಿ ಇರಿಸಲಾಗಿದ್ದ ಪಟಾಕಿಗಳಿಗೆ ಬೆಂಕಿ ತಗಲಿ ಭಾರೀ ಸ್ಫೋಟ ಸಂಭವಿಸಿದೆ ಎಂದು ಚಿತ್ರಕೂಟ ಜಿಲ್ಲಾಧಿಕಾರಿ ಅಭಿಷೇಕ್ ಆನಂದ್ ಹೇಳಿದ್ದಾರೆ.
ಮಧ್ಯಾಹ್ನ 3:20ರ ವೇಳೆಗೆ ಕಾಲೇಜು ಮೈದಾನದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿರುವ ಕಟ್ಟಡಗಳು ಕಂಪಿಸಿದವು. ಸ್ಫೋಟದ ತೀವ್ರತೆಯು ಎಷ್ಟು ಪ್ರಬಲವಾಗಿತ್ತೆಂದರೆ, ಮೃತದೇಹಗಳು ಇಡೀ ಪ್ರದೇಶದಲ್ಲಿ ಚೆಲ್ಲಾ ಪಿಲ್ಲಿಯಾಗಿ ಚದುರಿಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಸುಟ್ಟಗಾಯಗಳಿಂದಾಗಿ ಪ್ರಯಾಗರಾಜ್ ನ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರೆಲ್ಲರೂ ಚಿತ್ರಕೂಟ ಜಿಲ್ಲೆಯವರೆಂದು ತಿಳಿದುಬಂದಿದೆ. ಘಟನೆಯ ಬಗ್ಗೆ ತನಿಖೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಆದೇಶಿಸಿದ್ದಾರೆ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತತ್ವದಲ್ಲಿ ತನಿಖಾ ಸಮಿತಿಯೊಂದನ್ನು ರಚಿಸಲಾಗಿದೆ.
ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರಧನವನ್ನು ಮುಖ್ಯಮಂತ್ರಿ ಆದಿತ್ಯನಾಥ್ ಘೋಷಿಸಿದ್ದಾರೆ.







