ಉತ್ತರ ಪ್ರದೇಶ| ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 7 ಮಂದಿ ಸಾವು, ಹಲವರಿಗೆ ಗಾಯ

Photo: ANI
ಕೌಶಂಬಿ: ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ರವಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 6ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಖ್ರಾಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೂರ್ವಾಹ್ನ ಸುಮಾರು 11.30ಕ್ಕೆ ಈ ಘಟನೆ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ದಳದ ಹಲವು ತಂಡಗಳು ಹಾಗೂ ಆ್ಯಂಬುಲೆನ್ಸ್ಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿದವು.
ಮೃತಪಟ್ಟವರಲ್ಲಿ ನಾಲ್ವರನ್ನು ಶಿವಕಾಂತ್, ಶಾಹಿದ್ ಅಲಿ, ಅಶೋಕ್ ಕುಮಾರ್ ಹಾಗೂ ಶಿವ ನಾರಾಯಣ್ ಎಂದು ಗುರುತಿಸಲಾಗಿದೆ. ಉಳಿದ ಮೂವರನ್ನು ಇನ್ನಷ್ಟೇ ಗುರುತಿಸಬೇಕಾಗಿದೆ ಎಂದು ಹೆಚ್ಚುವರಿ ಡಿಜಿಪಿ (ಪ್ರಯಾಗ್ರಾಜ್) ಭಾನು ಭಾಸ್ಕರ್ ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಕೆಲವರನ್ನು ಬಬ್ಬು ಪಟೇಲ್, ದೀನಾ ಪಟೇಲ್, ಅಶೋಕ್ ಪಟೇಲ್ ಹಾಗೂ ಕೌಶಲ್ ಅಲಿ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘‘ಗಂಭೀರ ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟಾಕಿ ಕಾರ್ಖಾನೆ ವಸತಿ ಪ್ರದೇಶದಿಂದ ಸ್ಪಲ್ಪ ದೂರದಲ್ಲಿದೆ. ಸಂತ್ರಸ್ತರು ಕಾರ್ಖಾನೆಯ ಕೆಲಸಗಾರರು. ಕಾರ್ಖಾನೆ ನಡೆಸಲು ಮಾಲಕ ಪರವಾನಿಗೆ ಹೊಂದಿದ್ದಾನೆ’’ ಎಂದು ಕೌಶಂಬಿಯ ಪೊಲೀಸ್ ಅಧೀಕ್ಷಕ ಬ್ರಿಜೇಶ್ ಶ್ರೀವಾಸ್ತವ್ ಅವರು ತಿಳಿಸಿದ್ದಾರೆ.
ಇದಲ್ಲದೆ, ದುರಂತದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಪಟಾಕಿ ಕಾರ್ಖಾನೆಯ ಮಾಲಕ ಶಾಹಿದ್ ಅಲಿ ಕೂಡ ಸೇರಿದ್ದಾರೆ. ಘಟನೆ ನಡೆದ ಸಂದರ್ಭ ಕಾರ್ಖಾನೆಯಲ್ಲಿ 24ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.







