ತಮಿಳುನಾಡು | ವಸತಿ ಕಟ್ಟಡವೊಂದರಲ್ಲಿ ಸ್ಫೋಟ : ನಾಲ್ವರು ಮೃತ್ಯು

ಸಾಂದರ್ಭಿಕ ಚಿತ್ರ (PTI)
ಅಕ್ರಮ ಪಟಾಕಿ ದಾಸ್ತಾನು ಕುರಿತು ಪೊಲೀಸರಿಂದ ತನಿಖೆ
ಚೆನ್ನೈ,ಅ.19: ತಮಿಳುನಾಡಿನ ಆವಡಿ ಬಳಿಯ ದಂಡುರೈನಲ್ಲಿ ರವಿವಾರ ವಸತಿ ಕಟ್ಟಡವೊಂದರಲ್ಲಿ ಮನೆಯಲ್ಲಿ ತಯಾರಿಸಿದ ಪಟಾಕಿಗಳು ಸ್ಫೋಟಗೊಂಡು ಸಂಭವಿಸಿದ ಭೀಕರ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, ಪರಿಸರದಲ್ಲಿ ಆತಂಕದ ಸ್ಥಿತಿ ಸೃಷ್ಟಿಯಾಗಿದೆ.
ತಿರುವಲ್ಲೂರು ಜಿಲ್ಲೆಯ ಪಟ್ಟಾಭಿರಾಮ ಪ್ರದೇಶದಲ್ಲಿನ ಮನೆಯೊಂದರಲ್ಲಿ ಈ ಸ್ಫೋಟ ಸಂಭವಿಸಿದ್ದು,ಅಲ್ಲಿ ದೀಪಾವಳಿ ಹಬ್ಬಕ್ಕೆ ಮುನ್ನ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಸ್ಫೋಟದಿಂದಾಗಿ ಮನೆ ಸಂಪೂರ್ಣವಾಗಿ ನಾಶಗೊಂಡಿದ್ದು, ಶಬ್ದ ಪ್ರದೇಶದಾದ್ಯಂತ ಕೇಳಿ ಬಂದಿತ್ತು.
ಸ್ಥಳೀಯ ವರದಿಗಳ ಪ್ರಕಾರ ಸುನಿಲ್ ಪ್ರಕಾಶ್ ಮತ್ತು ಯಾಸಿನ್ ಎಂದು ಗುರುತಿಸಲಾಗಿರುವ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇತರ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಆವಡಿಯಿಂದ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿಗಳು ಶೋಧ ಮತ್ತು ರಕ್ಷಣಾ ಕಾರ್ಯವನ್ನು ಕೈಗೊಂಡರು.
ಪ್ರದೇಶದಲ್ಲಿ ಸಂಚಾರವನ್ನು ನಿರ್ಬಂಧಿಸಿರುವ ಪೊಲೀಸರು ಸ್ಫೋಟಕಗಳ ಮೂಲ ಮತ್ತು ಸ್ಫೋಟಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮನೆಯನ್ನು ಪಟಾಕಿಗಳ ಅನಧಿಕೃತ ದಾಸ್ತಾನು ಅಥವಾ ಮಾರಾಟಕ್ಕಾಗಿ ಬಳಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯು ಬೆಟ್ಟು ಮಾಡಿದೆ.
ಇಂತಹ ದುರಂತಗಳನ್ನು ತಡೆಯಲು ತಮ್ಮ ಪ್ರದೇಶಗಳಲ್ಲಿ ಅಕ್ರಮ ಪಟಾಕಿ ತಯಾರಿಕೆ ಅಥವಾ ದಾಸ್ತಾನು ಘಟಕಗಳಿದ್ದರೆ ವರದಿ ಮಾಡುವಂತೆ ಅಧಿಕಾರಿಗಳು ಜನರನ್ನು ಆಗ್ರಹಿಸಿದ್ದಾರೆ.
ರವಿವಾರ ತಡ ಸಂಜೆಯವರೆಗೂ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ರಾಜ್ಯ ಸರಕಾರವು ಮೃತರ ವಿವರಗಳು ದೃಢಪಟ್ಟ ಬಳಿಕ ಕುಟುಂಬಗಳಿಗೆ ಪರಿಹಾರ ಘೋಷಿಸುವ ನಿರೀಕ್ಷೆಯಿದೆ.







