ಮಹಾರಾಷ್ಟ್ರ | ರಸ್ತೆ ಬದಿ ಕುಳಿತಿದ್ದ ಬಾಲಕರಿಗೆ ಢಿಕ್ಕಿ ಹೊಡೆದ ಟ್ರಕ್; ನಾಲ್ವರು ಮೃತ್ಯು, ಇಬ್ಬರಿಗೆ ಗಾಯ
ಸಾಂದರ್ಭಿಕ ಚಿತ್ರ
ಗಡ್ಚಿರೋಲಿ (ಮಹಾರಾಷ್ಟ್ರ): ಟ್ರಕ್ ಒಂದು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಬಾಲಕರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಮೋಲಿ-ಗಡ್ಚಿರೋಲಿ ಹೆದ್ದಾರಿಯಲ್ಲಿ ಮುಂಜಾನೆ ಸುಮಾರು 5 ಗಂಟೆಗೆ ಈ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಜಿಲ್ಲಾ ಕೇಂದ್ರದಿಂದ 12 ಕಿಮೀ ದೂರವಿರುವ ಕಟ್ಲಿ ಗ್ರಾಮದಲ್ಲಿ 12ರಿಂದ 16 ವರ್ಷ ವಯಸ್ಸಿನ ನಡುವಿನ ಆರು ಮಂದಿ ಅಪ್ರಾಪ್ತ ಬಾಲಕರು ರಸ್ತೆ ಬದಿಯಲ್ಲಿ ಕುಳಿತಿದ್ದಾಗ, ಟ್ರಕ್ ಢಿಕ್ಕಿ ಹೊಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪೈಕಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಅಪಘಾತಕ್ಕೆ ಸಂತಾಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಈ ದುರದೃಷ್ಟಕರ ಹಾಗೂ ದುರಂತಮಯ ಅಪಘಾತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ದೇವೇಂದ್ರ ಫಡ್ನವಿಸ್, “ದುಃಖತಪ್ತ ಕುಟುಂಬಗಳಿಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರು ಬಾಲಕರಿಗೆ ಗಡ್ಚಿರೋಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ನಾಗ್ಪುರಕ್ಕೆ ಏರ್ ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.
“ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಧನ ನೀಡಲಾಗುವುದು ಹಾಗೂ ಅಪಘಾತದಲ್ಲಿ ಗಾಯಗೊಂಡಿರುವ ಬಾಲಕರ ವೈದ್ಯಕೀಯ ಚಿಕಿತ್ಸೆಯ ಎಲ್ಲ ವೆಚ್ಚವನ್ನು ಸರಕಾರ ಭರಿಸಲಿದೆ” ಎಂದು ಅವರು ಪ್ರಕಟಿಸಿದ್ದಾರೆ.







