ವಿಶ್ವದ ಶೇ.40ರಷ್ಟು ಜನರಿಗೆ ತಮಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ಲಭ್ಯವಾಗುತ್ತಿಲ್ಲ: ಯುನೆಸ್ಕೋ

Photo : Reuters
ಹೊಸದಿಲ್ಲಿ: ಯುನೆಸ್ಕೋದ ಗ್ಲೋಬಲ್ ಎಜ್ಯುಕೇಶನ್ ಮಾನಿಟರಿಂಗ್ (ಜಿಇಎಂ) ತಂಡದ ಪ್ರಕಾರ ವಿಶ್ವದ ಶೇ.40ರಷ್ಟು ಜನಸಂಖ್ಯೆಗೆ ತಾವು ಮಾತನಾಡುವ ಅಥವಾ ತಮಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ಲಭ್ಯವಿಲ್ಲ.
ಮಾತೃಭಾಷೆಯ ಪಾತ್ರದ ಕುರಿತು ದೇಶಗಳಲ್ಲಿ ತಿಳುವಳಿಕೆ ಹೆಚ್ಚುತ್ತಿದ್ದರೂ, ಸಂಬಂಧಿಸಿದಂತೆ ನೀತಿ ಅಳವಡಿಕೆಯು ಸೀಮಿತವಾಗಿದೆ. ಮನೆ ಭಾಷೆಗಳನ್ನು ಬಳಸುವಲ್ಲಿ ಶಿಕ್ಷಕರ ಸೀಮಿತ ಸಾಮರ್ಥ್ಯ, ಮನೆ ಭಾಷೆಗಳಲ್ಲಿ ಕಲಿಕಾ ಸಾಮಗ್ರಿಗಳ ಅಲಭ್ಯತೆ ಮತ್ತು ಸಮುದಾಯದ ವಿರೋಧ ಇವು ಇಂತಹ ನೀತಿ ಅನುಷ್ಠಾನದಲ್ಲಿಯ ಸವಾಲುಗಳಲ್ಲಿ ಸೇರಿವೆ ಎಂದು ಜಿಇಎಂ ಹೇಳಿದೆ.
ಕೆಲವು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಈ ಸಂಖ್ಯೆ ಶೇ.90ರಷ್ಟಿದ್ದು, 25 ಕೋಟಿಗೂ.ಅಧಿಕ ವಿದ್ಯಾರ್ಥಿಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ ಎಂದು ಹೇಳಿರುವ ಜಿಇಎಂ ಅಧಿಕಾರಿಗಳು, ಎಲ್ಲ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಲ್ಲ ಶೈಕ್ಷಣಿಕ ವ್ಯವಸ್ಥೆಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಬಹುಭಾಷಾ ಶಿಕ್ಷಣ ನೀತಿಗಳು ಮತ್ತು ಪದ್ಧತಿಗಳನ್ನು ಜಾರಿಗೊಳಿಸುವಂತೆ ದೇಶಗಳಿಗೆ ಶಿಫಾರಸು ಮಾಡಿದ್ದಾರೆ.
‘ಭಾಷೆಗಳು ಮುಖ್ಯ: ಬಹುಭಾಷಾ ಶಿಕ್ಷಣ ಕುರಿತು ಜಾಗತಿಕ ಮಾರ್ಗದರ್ಶನ’ ಶೀರ್ಷಿಕೆಯ ವರದಿಯನ್ನು ಬಿಡುಗಡೆಗೊಳಿಸಿರುವ ಜಿಇಎಂ ತಂಡವು, ವಲಸೆ ಹೆಚ್ಚುತ್ತಿದ್ದಂತೆ ಭಾಷಾ ವೈವಿಧ್ಯತೆಯು ಜಾಗತಿಕ ವಾಸ್ತವವಾಗುತ್ತಿದೆ ಮತ್ತು ವೈವಿಧ್ಯಮಯ ಭಾಷಾ ಹಿನ್ನೆಲೆಗಳ ವಿದ್ಯಾರ್ಥಿಗಳನ್ನು ಹೊಂದಿರುವ ತರಗತಿ ಕೋಣೆಗಳು ಹೆಚ್ಚು ಸಾಮಾನ್ಯವಾಗಿವೆ. ಸ್ಥಳಾಂತರಗೊಂಡಿರುವ 3.10 ಕೋಟಿ ಗೂ ಅಧಿಕ ವಿದ್ಯಾರ್ಥಿಗಳು ಭಾಷಾ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದೆ.
ಅಂತರರಾಷ್ಟ್ರೀಯ ಮಾತೃಭಾಷಾ ದಿನದ 25ನೇ ವರ್ಷದ ಸಂದರ್ಭದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
ಭಾರತವು ಬಹುಭಾಷಾ ಶಿಕ್ಷಣವನ್ನು ಪ್ರತಿಪಾದಿಸುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ಅನುಷ್ಠಾನಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಸಂದರ್ಭದಲ್ಲಿ ಈ ವರದಿಯು ಬಿಡುಗಡೆಗೊಂಡಿದೆ. ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ನೀತಿಗೆ ಕೆಲವು ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದೆ.
ಯುವಜನರ ಜೀವನದಲ್ಲಿ ತಂತ್ರಜ್ಞಾನದ ವ್ಯಾಪಕ ಪ್ರಭಾವವನ್ನು ಗುರುತಿಸಿರುವ, ಆದರೆ ಕೋವಿಡ್ ಸಾಂಕ್ರಾಮಿಕದ ಪರಿಣಾಮಕ್ಕೂ ಸಾಕ್ಷಿಯಾಗಿರುವ ಈ ದಶಕದಲ್ಲಿ ಓದುವುದರಲ್ಲಿ ಮತ್ತು ಗಣಿತಶಾಸ್ತ್ರ ಎರಡರಲ್ಲೂ ಕಲಿಕೆಯ ಮಟ್ಟಗಳು ತೀವ್ರವಾಗಿ ಕುಸಿದಿವೆ ಎನ್ನುವುದು ಗಮನಿಸಬೇಕಾದ ಮೊದಲ ಅಂಶವಾಗಿದೆ. ಆದರೆ ಭಾಷೆಯ ಕಾರಣಗಳಿಂದಾಗಿ ಅನನುಕೂಲವನ್ನು ಎದುರಿಸಿರುವ ವಿದ್ಯಾರ್ಥಿಗಳ ಮೇಲೆ ಪರಿಣಾಮವು ಸಮಾನವಾಗಿಲ್ಲ ಎನ್ನುವುದು ಗಮನಿಸಬೇಕಾದ ಇನ್ನೊಂದು ಅಂಶವಾಗಿದೆ ಎಂದು ವರದಿಯು ತಿಳಿಸಿದೆ.
ಐತಿಹಾಸಿಕ ಕಾರಣಗಳಿಂದ ಅಥವಾ ವಲಸೆ ಮತ್ತು ಸ್ಥಳಾಂತರದಿಂದಾಗಿ ಮನೆಯಲ್ಲಿ ಬೋಧನಾ ಭಾಷೆಯನ್ನು ಮಾತನಾಡದ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಷ್ಟವನ್ನು ಅನುಭವಿಸುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವರದಿಯು ಬೆಟ್ಟು ಮಾಡಿದೆ.
ಶೈಕ್ಷಣಿಕ ಭಾಷಾ ನೀತಿಗಳು ಆಯಾ ಸಂದರ್ಭಕ್ಕೆ ಸೂಕ್ತ ವಿಧಾನಗಳಿಗೆ ಆದ್ಯತೆಯನ್ನು ನೀಡಬೇಕು ಮತ್ತು ಭಾಷಾ ಪರಿವರ್ತನೆಯು ಪಠ್ಯಕ್ರಮದ ಹೊಂದಾಣಿಕೆಗಳು ಹಾಗೂ ಆ ದರ್ಜೆಗೆ ಅಳವಡಿಸಿಕೊಳ್ಳಲಾದ ಬೋಧನಾ ಕ್ರಮ ಮತ್ತು ಕಲಿಕಾ ಸಾಮಗ್ರಿಗಳಿಂದ ಬೆಂಬಲಿತವಾಗಿರಬೇಕು ಎಂದು ಜಿಇಎಂ ತಂಡವು ಶಿಫಾರಸು ಮಾಡಿದೆ.







