ಕೇಂದ್ರ ಸರಕಾರದ ಇಲಾಖೆಗಳ 40 ಶೇ. ಪ್ರಚಾರ ನಿಧಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ: ಕಾಂಗ್ರೆಸ್ ಆರೋಪ

ಜೈರಾಮ್ ರಮೇಶ್ | Photo: PTI
ಹೊಸದಿಲ್ಲಿ: ಎಲ್ಲಾ ಸಚಿವಾಲಯಗಳಿಗೆ ನಿಗದಿಪಡಿಸಲಾಗಿರುವ ಪ್ರಚಾರ ನಿಧಿಗಳ ಪೈಕಿ 40 ಶೇಕಡದಷ್ಟನ್ನು ಕೇಂದ್ರೀಯ ಪ್ರಚಾರ ಬ್ಯೂರೋಗೆ ನೀಡುವಂತೆ ಕೇಂದ್ರ ಸರಕಾರವು ಸೂಚನೆ ನೀಡಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ. ಕೇಂದ್ರ ಹಣಕಾಸು ಸಚಿವಾಲಯದ ಮೇ ತಿಂಗಳ ಆದೇಶವನ್ನು ಉಲ್ಲೇಖಿಸಿ ಅದು ಈ ಆರೋಪ ಮಾಡಿದೆ.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರೀಯ ಪ್ರಚಾರ ಬ್ಯೂರೋ ಸರಕಾರಿ ಇಲಾಖೆಗಳ ಪರವಾಗಿ ಜಾಹೀರಾತುಗಳನ್ನು ಬಿಡುಗಡೆಗೊಳಿಸುತ್ತದೆ.
ಸರಕಾರದ ಮೇ 19ರ ಆದೇಶವು, ಎಲ್ಲಾ ಸರಕಾರಿ ಇಲಾಖೆಗಳ ಬಜೆಟ್ ಗಳಿಗಾಗಿ ಸಂಸತ್ ನಲ್ಲಿ ನಡೆಯುವ ಮತದಾನ ಪ್ರಕ್ರಿಯೆಯ ಪಾವಿತ್ರವನ್ನು ‘‘ಸಂಪೂರ್ಣವಾಗಿ ಕಡೆಗಣಿಸುತ್ತದೆ’’ ಎಂದು ಟ್ವೀಟೊಂದರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬರೆದಿದ್ದಾರೆ.
2023-24ನೇ ಸಾಲಿಗಾಗಿ ಕೇಂದ್ರೀಯ ಪ್ರಚಾರ ಬ್ಯೂರೋಗೆ 200 ಕೋಟಿ ರೂಪಾಯಿ ಬಜೆಟ್ ನ್ನು ಸಂಸತ್ ಮಂಜೂರು ಮಾಡಿತ್ತು ಎಂದು ದಾಖಲೆಗಳನ್ನು ಉಲ್ಲೇಖಿಸಿ ರಮೇಶ್ ಹೇಳಿದ್ದಾರೆ. ಆದರೆ, ಈ ಆದೇಶದ ಪರಿಣಾಮವಾಗಿ ಬ್ಯೂರೋದ ಬಜೆಟ್ 750 ಕೋಟಿ ರೂಪಾಯಿಗಿಂತಲೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.
‘‘ಈ ಕೇಂದ್ರೀಯ ಪ್ರಚಾರ ಬ್ಯೂರೋ ಎನ್ನುವುದು (ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯಗಳ ಜೊತೆಗೆ) ಮೋದಿ ಸರಕಾರದ 2024ರ ಚುನಾವಣಾ ಪ್ರಚಾರದ ಒಂದು ಭಾಗ ಎನ್ನುವುದು ಸ್ಪಷ್ಟ. ಅದು ‘ಪಿಎಮ್ ಯಾನೆ ಪ್ರಚಾರ ಮಂತ್ರಿ’ಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಆದರೆ ಈ ಪ್ರಚಾರ ಯಂತ್ರಕ್ಕೆ ಸಾಕಷ್ಟು ನಿಧಿಯಿರಲಿಲ್ಲ’’ ಎಂದು ರಮೇಶ್ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ ಸರಕಾರವು ಸರಕಾರಿ ಇಲಾಖೆಗಳ 40 ಶೇ. ನಿಧಿಗಳನ್ನು ಕಬಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು ಹಾಗೂ ಇದು ಹಣದ ಅವ್ಯವಹಾರವಲ್ಲವೇ ಎಂದು ಅವರು ಪ್ರಶ್ನಿಸಿದರು.







