2023-24ನೇ ವರ್ಷದಲ್ಲಿ 40 ಪ್ರಾದೇಶಿಕ ಪಕ್ಷಗಳಿಂದ 2,532 ಕೋಟಿ ರೂ. ಆದಾಯ ಘೋಷಣೆ: ಎಡಿಆರ್ ವರದಿ

ಎಡಿಆರ್ | PC : ADR
ಹೊಸದಿಲ್ಲಿ: 60 ಪ್ರಾದೇಶಿಕ ಪಕ್ಷಗಳ ಪೈಕಿ 40 ಪ್ರಾದೇಶಿಕ ಪಕ್ಷಗಳು 2023-24ನೇ ಹಣಕಾಸಿನ ಸಾಲಿನ ತಮ್ಮ ಬ್ಯಾಂಕ್ ಖಾತೆಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಒಟ್ಟಾರೆಯಾಗಿ ಈ ಪಕ್ಷಗಳು 2023-24ನೇ ಹಣಕಾಸಿನ ಸಾಲಿನಲ್ಲಿ 2,532.09 ಕೋಟಿ ರೂ. ಆದಾಯ ಗಳಿಸಿದ್ದೇವೆ ಎಂದು ಘೋಷಿಸಿಕೊಂಡಿವೆ.
ಈ ಪೈಕಿ 1,796.02 ಕೋಟಿ ರೂ. ಆದಾಯ (ಶೇ. 70.93) ಸ್ವಯಂಪ್ರೇರಿತ ದೇಣಿಗೆಯಿಂದಲೇ ಬಂದಿದೆ ಎಂದು ಹೇಳಿಕೊಂಡಿವೆ.
ಅಸೋಸಿಯೇಷನ್ ಫಾರ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯ ಪ್ರಕಾರ, ಬಿಆರ್ಎಸ್ ಅತ್ಯಧಿಕ 685.51 ಕೋಟಿ ರೂ. ಆದಾಯ ಗಳಿಸಿದ್ದು, ಬಳಿಕ, ತೃಣಮೂಲ ಕಾಂಗ್ರೆಸ್ 646.39 ಕೋಟಿ ಆದಾಯ ಗಳಿಸುವ ಮೂಲಕ ಎರಡನೆ ಸ್ಥಾನದಲ್ಲಿದೆ. ಬಿಜೆಡಿ (297.81 ಕೋಟಿ ರೂ.), ಟಿಡಿಪಿ (285.07 ಕೋಟಿ ರೂ.) ಹಾಗೂ ವೈಎಸ್ಆರ್ ಕಾಂಗ್ರೆಸ್ (191.04 ಕೋಟಿ ರೂ.) ನಂತರದ ಸ್ಥಾನದಲ್ಲಿವೆ. ಈ ಪೈಕಿ 40 ಪ್ರಾದೇಶಿಕ ಪಕ್ಷಗಳು ಒಟ್ಟಾರೆಯಾಗಿ 1,320.96 ಕೋಟಿ ರೂ. ವೆಚ್ಚ ಮಾಡಿದ್ದು, ವೈಎಸ್ಆರ್ ಕಾಂಗ್ರೆಸ್ 295.76 ಕೋಟಿ ರೂ. ಹಾಗೂ ಬಿಆರ್ಎಸ್ 254.91 ಕೋಟಿ ರೂ. ವೆಚ್ಚ ಮಾಡಿವೆ.
ಖಾಸಗಿ ಚುನಾವಣಾ ನಿಗಾ ಸಂಸ್ಥೆಯಾದ ಎಡಿಆರ್ ವಿಶ್ಲೇಷಣೆಯ ಪ್ರಕಾರ, 5 ಪ್ರಾದೇಶಿಕ ಪಕ್ಷಗಳು ಗಳಿಸಿರುವ ಆದಾಯ 2,105.82 ಕೋಟಿ ರೂ. ಇದ್ದು, ಇದು ಒಟ್ಟು 40 ಪ್ರಾದೇಶಿಕ ಪಕ್ಷಗಳು ಗಳಿಸಿರುವ ಆದಾಯದ ಶೇ. 83.17ರಷ್ಟಾಗಿದೆ ಎಂದು ಹೇಳಲಾಗಿದೆ.
ವರದಿಯ ಪ್ರಕಾರ, ಚುನಾವಣಾ ಬಾಂಡ್ ಮೂಲಕ, ತೃಣಮೂಲ ಕಾಂಗ್ರೆಸ್ ಪಕ್ಷ ತನ್ನ ಆದಾಯದ ಶೇ. 94.74ರಷ್ಟು ಅಥವಾ 612.42 ಕೋಟಿ ರೂ. ಮೊತ್ತವನ್ನು ಆದಾಯವಾಗಿ ಗಳಿಸಿದ್ದರೆ, ಬಿಆರ್ಎಸ್ ಪಕ್ಷವು 495.52 ಕೋಟಿ ರೂ. (ಶೇ. 72.28) ದೇಣಿಗೆ ಅನ್ನು ಚುನಾವಣಾ ಬಾಂಡ್ ಮೂಲಕ ಸ್ವೀಕರಿಸಿರುವುದಾಗಿ ಘೋಷಿಸಿದೆ. ನಂತರದ ಸ್ಥಾನದಲ್ಲಿರುವ ಬಿಜೆಡಿ, ತನ್ನ ಆದಾಯದ ಶೇ. 82.44ರಷ್ಟು ಅಥವಾ 245.50 ಕೋಟಿ ರೂ. ಅನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆಯಾಗಿ ಸ್ವೀಕರಿಸಿದೆ.
40 ಪ್ರಾದೇಶಿಕ ಪಕ್ಷಗಳ ಪೈಕಿ 39 ಪ್ರಾದೇಶಿಕ ಪಕ್ಷಗಳ ಎರಡೂ ವರ್ಷಗಳ ದತ್ತಾಂಶ ಲಭ್ಯವಿದ್ದು, ಈ ಪೈಕಿ 23 ಪಕ್ಷಗಳು 2022-23ನೇ ಸಾಲಿಗಿಂತ 2023-24ನೇ ಸಾಲಿನಲ್ಲಿ ತಮ್ಮ ಆದಾಯ ಹೆಚ್ಚಳವಾಗಿರುವುದಾಗಿ ಘೋಷಿಸಿಕೊಂಡಿವೆ. ಆದರೆ, ಈ ಅವಧಿಯಲ್ಲಿ 15 ಪಕ್ಷಗಳು ಆದಾಯ ಕುಸಿತವಾಗಿದೆ ಎಂದು ಹೇಳಿಕೊಂಡಿವೆ.
2022-23 ಹಾಗೂ 2023-24ನೇ ಸಾಲಿನಲ್ಲಿ ತಾನು ಶೂನ್ಯ ಆದಾಯ ಗಳಿಸಿರುವುದಾಗಿ ಗೋವಾ ಫಾರ್ವರ್ಡ್ ಪಾರ್ಟಿ ಹೇಳಿಕೊಂಡಿದ್ದರೆ, ತೃಣಮೂಲ ಕಾಂಗ್ರೆಸ್ ಪಕ್ಷವು ಅತ್ಯಧಿಕ 312.93 ಕೋಟಿ ರೂ. ಆದಾಯ ಗಳಿಸಿರುವುದಾಗಿ ಘೋಷಿಸಿಕೊಂಡಿದೆ. ಇದರ ಬೆನ್ನಿಗೆ, ಟಿಡಿಪಿ ಹಾಗೂ ಬಿಜೆಡಿ ಕ್ರಮವಾಗಿ 221.07 ಕೋಟಿ ರೂ. ಹಾಗೂ 116.75 ಕೋಟಿ ರೂ. ಏರಿಕೆ ದಾಖಲಿಸಿವೆ.
ತಮ್ಮ ಆದಾಯದ ಒಂದು ಭಾಗವೂ ವೆಚ್ಚವಾಗಿಲ್ಲ ಎಂದು 27 ಪಕ್ಷಗಳು ಘೋಷಿಸಿಕೊಂಡಿದ್ದರೆ, ಈ ಸಾಲಿನಲ್ಲಿ 12 ಪಕ್ಷಗಳ ವೆಚ್ಚ ಆದಾಯವನ್ನು ಮೀರಿವೆ. ಬಿಆರ್ಎಸ್ ಪಕ್ಷ 630.60 ಕೋಟಿ ರೂ. ಅನ್ನು ವೆಚ್ಚ ಮಾಡಿಲ್ಲವಾದರೆ, ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಡಿ ಕ್ರಮವಾಗಿ 414.92 ಕೋಟಿ ರೂ. ಹಾಗೂ 253.79 ಕೋಟಿ ರೂ. ಅನ್ನು ವೆಚ್ಚ ಮಾಡಿಲ್ಲ.
ಇದೇ ವೇಳೆ, 12 ಪ್ರಾದೇಶಿಕ ಪಕ್ಷಗಳ ವೆಚ್ಚ ಅವುಗಳ ಆದಾಯವನ್ನು ಮೀರಿವೆ. ಈ ಪೈಕಿ ವೈಎಸ್ಆರ್ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಸಿಪಿಐ(ಎಂಎಲ್)ಎಲ್, ಎಲ್ಜೆಪಿ(ಆರ್ವಿ) ಹಾಗೂ ಜೆಡಿಯು ಸೇರಿವೆ.
“ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ದೇಣಿಗೆದಾರರ ಸಂಪೂರ್ಣ ವಿವರ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗಬೇಕು. ಮಾಹಿತಿ ಹಕ್ಕು ಕಾಯ್ದೆಯಡಿ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಹಣಕಾಸಿನ ಮಾಹಿತಿಯನ್ನು ಒದಗಿಸಬೇಕು. ಇದರಿಂದ ಮಾತ್ರ ರಾಜಕೀಯ ಪಕ್ಷಗಳು, ಚುನಾವಣೆಗಳು ಹಾಗೂ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಲಿದೆ” ಎಂದು ಎಡಿಆರ್ ವರದಿಯಲ್ಲಿ ಹೇಳಲಾಗಿದೆ.
ಇದರೊಂದಿಗೆ, ಪ್ರತಿ ವರ್ಷ ತಮ್ಮ ಲೆಕ್ಕ ಪರಿಶೋಧನೆ ಹಾಗೂ ದೇಣಿಗೆ ವರದಿಗಳ ಸಲ್ಲಿಕೆಯನ್ನು ವಿಳಂಬಗೊಳಿಸುವ ಅಥವಾ ತಪ್ಪಿಸುವ ಎಲ್ಲ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ವಿರುದ್ಧ ದಂಡನಾರ್ಹ ಅಥವಾ ಕಠಿಣ ಕ್ರಮವನ್ನು ಜರುಗಿಸಬೇಕು ಎಂದೂ ಈ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಸೌಜನ್ಯ: deccanherald.com







