ಮೇಘಾಲಯದಲ್ಲಿ 4,000 ಟನ್ ಕಲ್ಲಿದ್ದಲು ನಾಪತ್ತೆ!; ಮಳೆಯನ್ನು ದೂಷಿಸಿದ ಸಚಿವ!

ಸಾಂದರ್ಭಿಕ ಚಿತ್ರ
ಶಿಲ್ಲಾಂಗ್: ಮೇಘಾಲಯದಲ್ಲಿ 4,000ಕ್ಕೂ ಹೆಚ್ಚು ಟನ್ ಕಲ್ಲಿದ್ದಲು ನಾಪತ್ತೆಯಾಗಲು ಭಾರಿ ಪ್ರಮಾಣದಲ್ಲಿ ಸುರಿದ ಮಳೆ ಕಾರಣ ಎಂದು ಮೇಘಾಲಯ ಸಚಿವರೊಬ್ಬರು ಸಮರ್ಥಿಸಿಕೊಂಡಿದ್ದಾರೆ. 4,000ಕ್ಕೂ ಹೆಚ್ಚು ಟನ್ ಕಲ್ಲಿದ್ದಲು ನಾಪತ್ತೆ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಮೇಘಾಲಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ, ಈ ಬೆಳವಣಿಗೆ ನಡೆದಿದೆ.
ರಾಜ್ಯದಲ್ಲಿ ಕಲ್ಲಿದ್ದಲು ನಾಪತ್ತೆ ಕುರಿತು ಹೈಕೋರ್ಟ್ ಪ್ರಶ್ನಿದಸಿದ ಬೆನ್ನಿಗೇ, “ರಾಜ್ಯದಲ್ಲಿ ಭಾರಿ ಮಳೆ ಸುರಿದ ಪರಿಣಾಮ, ಕಲ್ಲಿದ್ದಲು ಕೊಚ್ಚಿಕೊಂಡು ಹೋಗಿರಬಹುದು” ಎಂಬ ಅಸಹಜ ಉತ್ತರವನ್ನು ರಾಜ್ಯ ಅಬಕಾರಿ ಸಚಿವ ಕೈರ್ಮೆನ್ ಶೈಲಾ ಸುದ್ದಿಗಾರರಿಗೆ ನೀಡಿದ್ದಾರೆ.
ಆದರೆ, ರಜಜು ಮತ್ತು ಡಿಯೆಂಗ್ನಾನ್ ಗ್ರಾಮಗಳಿಂದ ನಾಪತ್ತೆಯಾಗಿರುವ ಕಲ್ಲಿದ್ದಲಿನ ಸಂಗ್ರಹದ ಮೇಲೆ ನಿಗಾ ವಹಿಸಿದ್ದ ಅಧಿಕಾರಿಗಳ ವಿರುದ್ಧ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಮೇಘಾಲಯ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಮೇಘಾಲಯ ಅಬಕಾರಿ ಸಚಿವ ಕೈರ್ಮೆನ್ ಶೈಲಾರನ್ನು ಸುದ್ದಿಗಾರರು ಪ್ರಶ್ನಿಸಿದಾಗ, “ಮೇಘಾಲಯದಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಈ ಮಳೆಯಿಂದಾಗಿ ಕಲ್ಲಿದ್ದಲು ಕೊಚ್ಚಿಕೊಂಡು ಹೋಗಿರಬಹುದು. ಈ ಸಾಧ್ಯತೆ ಅಧಿಕವಾಗಿದೆ” ಎಂಬ ವಿಚಿತ್ರ ಉತ್ತರ ನೀಡಿದ್ದಾರೆ. ಇದೇ ವೇಳೆ, ನಾನು ಕಲ್ಲಿದ್ದಲು ನಾಪತ್ತೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.
ಪರಿಸರ ಸಮಸ್ಯೆಗಳು ಹಾಗೂ ನಿರಂತರವಾಗಿ ನಡೆಯುತ್ತಿರುವ ಅನಿರ್ಬಂಧಿತ ಮತ್ತು ಅಸುರಕ್ಷಿತ ಗಣಿಗಾರಿಕೆಯನ್ನು ಉಲ್ಲೇಖಿಸಿ, 2014ರಲ್ಲಿ ರಾಷ್ಟ್ರೀಯ ಹಸಿರು ಮಂಡಳಿಯು ಮೇಘಾಲಯದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಪೂರ್ವ ಜೈಂತಿಯಾ ಬೆಟ್ಟಗಳಲ್ಲಿ ವೈಜ್ಞಾನಿಕ ಕಲ್ಲಿದ್ದಲು ಗಣಿಗಾರಿಕೆಗೆ ಚಾಲನೆ ನೀಡಲಾಗಿತ್ತು.







