ಮಣಿಪುರ | 42 ಶಸ್ತ್ರಾಸ್ತ್ರಗಳ ಶರಣಾಗತಿ; ಐದು ಅಕ್ರಮ ಬಂಕರ್ ಗಳ ನಾಶ

Photo: PTI
ಇಂಫಾಲ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಐದು ಜಿಲ್ಲೆಗಳಲ್ಲಿನ ನಾಗರಿಕರು ಇನ್ನೂ 42 ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಶರಣಾಗಿಸಿದ್ದಾರೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಶನಿವಾರದಂದು ಪೂರ್ವ ಇಂಫಾಲ, ಪಶ್ಚಿಮ ಇಂಫಾಲ, ಚೂರಚಂದ್ ಪುರ್, ಬಿಷ್ಣುಪುರ್ ಹಾಗೂ ತಮೆಂಗ್ಲಾಂಗ್ ಜಿಲ್ಲೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಶರಣಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಷ್ಣುಪುರ ಜಿಲ್ಲೆಯಲ್ಲಿ ಎರಡು ಪಿಸ್ತೂಲುಗಳು, ಆರು ಗ್ರನೇಡ್ ಗಳು ಹಾಗೂ 75ಕ್ಕೂ ಹೆಚ್ಚು ಗುಂಡುಮದ್ದುಗಳು ಸೇರಿದಂತೆ ಐದು ಶಸ್ತ್ರಾಸ್ತ್ರಗಳನ್ನು ಶರಣಾಗಿಸಲಾಗಿದೆ.
ತಮೆಂಗ್ಲಾಂಗ್ ಜಿಲ್ಲೆಯ ಕೈಮೈ ಪೊಲೀಸ್ ಠಾಣೆಗೆ ಏಳು ದೇಶೀ ಪಿಸ್ತೂಲುಗಳು, ಒಂಬತ್ತು ಸ್ಥಳೀಯ ನಿರ್ಮಿತ ಸಣ್ಣ ಫಿರಂಗಿಗಳು ಆರು ಗ್ರನೇಡ್ ಗಳು ಹಾಗೂ 75 ಮದ್ದುಗುಂಡುಗಳನ್ನು ಶರಣಾಗಿಸಲಾಗಿದೆ.
ಐಂಗಾಂಗ್ಪೋಕ್ಪಿ, ಪೊರೊಂಪಟ್, ಚೂರ ಚಂದ್ ಪುರ್ ಹಾಗೂ ಲಾಮ್ಸಾಂಗ್ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ 10 ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಶರಣಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶನಿವಾರ ಪಶ್ಚಿಮ ಇಂಫಾಲ ಜಿಲ್ಲೆಯ ಸೈರೆಮ್ಖುಲ್ ನಲ್ಲಿ ನಡೆದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ 20 ಸುತ್ತಿನ ಮದ್ದುಗುಂಡುಗಳನ್ನು ಭರ್ತಿ ಮಾಡಿದ್ದ ಒಂದು ಮ್ಯಾಗಝೀನ್ ನೊಂದಿಗೆ ಇನ್ಸಾಸ್ ಎಲ್ಎಂಜಿ ಶಸ್ತ್ರಾಸ್ತ್ರ, ಒಂದು ಎಕ್-56 ರೈಫಲ್, ಮೂರು ಎಸ್ಎಲ್ಆರ್ ರೈಫಲ್ ಗಳು, ಒಂದು ಡಿಬಿಬಿಎಲ್ ಗನ್, ಸ್ಪೋಟಕಗಳನ್ನು ಹೊಂದಿದ್ದ ನಾಲ್ಕು ಗ್ರನೇಡ್ ಗಳು, ಒಂದು ಚೀನಾ ನಿರ್ಮಿತ ಹ್ಯಾಂಡ್ ಗ್ರನೇಡ್ ಹಾಗೂ ಇನ್ನಿತರ ಸ್ಫೋಟಕ ಸಾಮಗ್ರಿಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಶನಿವಾರ ಕಾಂಗ್ಪೋಕ್ಪಿ ಜಿಲ್ಲೆಯ ತಿಂಗ್ಸಾಟ್ ಪರ್ವತ ಶ್ರೇಣಿಯ ಮಾರ್ಕ್ ಹಿಲ್ ನಲ್ಲಿ ನಿರ್ಮಿಸಲಾಗಿದ್ದ ಎರಡು ಅಕ್ರಮ ಬಂಕರ್ ಗಳನ್ನು ಭದ್ರತಾ ಪಡೆಗಳು ನೆಲಸಮಗೊಳಿಸಿವೆ. ಪೂರ್ವ ಇಂಫಾಲ ಜಿಲ್ಲೆ ಹಾಗೂ ಕಾಂಗ್ಪೋಕ್ಪಿ ಜಿಲ್ಲೆಗೆ ಹೊಂದಿಕೊಂಡಿರುವ ವಾಕನ್ ಪರ್ವತ ಶ್ರೇಣಿಯಲ್ಲಿ ನಿರ್ಮಿಸಲಾಗಿದ್ದ ಇನ್ನೂ ಮೂರು ಅಕ್ರಮ ಬಂಕರ್ ಗಳನ್ನೂ ಧ್ವಂಸಗೊಳಿಸಲಾಗಿದೆ.
ಭದ್ರತಾ ಪಡೆಗಳಿಂದ ಅಪಹರಿಸಿರುವ ಆಯುಧಗಳು ಹಾಗೂ ಅಕ್ರಮವಾಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಇನ್ನು ಏಳು ದಿನಗಳೊಳಗಾಗಿ ಸ್ವಯಂಪ್ರೇರಿತವಾಗಿ ಶರಣಾಗಿಸುವಂತೆ ಕಾಳಗ ನಿರತ ಗುಂಪುಗಳಿಗೆ ಫೆಬ್ರವರಿ 20ರಂದು ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಕರೆ ನೀಡಿದ್ದರು.







