ಭಾರತದ ಶೇ.44ರಷ್ಟು ನಗರಗಳು ದೀರ್ಘಕಾಲಿಕ ವಾಯು ಮಾಲಿನ್ಯವನ್ನು ಎದುರಿಸುತ್ತಿವೆ: ವರದಿ

Photo Credit: ANI
ಹೊಸದಿಲ್ಲಿ,ಜ.9: ಸುಮಾರು ಶೇ.44ರಷ್ಟು ಭಾರತೀಯ ನಗರಗಳು ದೀರ್ಘಕಾಲಿಕ ವಾಯು ಮಾಲಿನ್ಯವನ್ನು ಎದುರಿಸುತ್ತಿದ್ದು,ಇದು ಅಲ್ಪಾವಧಿ ಸಮಸ್ಯೆಗಿಂತ ನಿರಂತರ ಮಾಲಿನ್ಯ ಮೂಲಗಳಿಂದ ಉಂಟಾಗಿರುವ ರಚನಾತ್ಮಕ ಸಮಸ್ಯೆಯನ್ನು ಸೂಚಿಸುತ್ತಿದೆ ಎಂದು ಸೆಂಟರ್ ಫಾರ್ ರೀಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (ಸಿಆರ್ಇಎ) ತನ್ನ ವಿಶ್ಲೇಷಣಾ ವರದಿಯಲ್ಲಿ ತಿಳಿಸಿದೆ. ಆದಾಗ್ಯೂ ಈ ನಗರಗಳ ಪೈಕಿ ಕೇವಲ ಶೇ.4ರಷ್ಟು ಮಾತ್ರ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ (ಎನ್ಸಿಎಪಿ) ವ್ಯಾಪ್ತಿಗೊಳಪಟ್ಟಿವೆ ಎಂದು ಅದು ಬೆಟ್ಟು ಮಾಡಿದೆ.
ಸಿಆರ್ಇಎ ಉಪಗ್ರಹ ದತ್ತಾಂಶಗಳನ್ನು ಬಳಸಿಕೊಂಡು 4,041 ಭಾರತೀಯ ನಗರಗಳಲ್ಲಿಯ ಪಿಎಂ2.5 ಮಟ್ಟಗಳನ್ನು ನಿರ್ಧರಿಸಿದೆ.
4,041 ನಗರಗಳ ಪೈಕಿ ಕನಿಷ್ಠ 1,787 ನಗರಗಳು 2020ರ ಕೋವಿಡ್ ಪೀಡಿತ ವರ್ಷವನ್ನು ಹೊರತುಪಡಿಸಿ ಇತ್ತೀಚಿನ ಐದು ವರ್ಷಗಳಲ್ಲಿ ರಾಷ್ಟ್ರೀಯ ವಾರ್ಷಿಕ ಪಿಎಂ2.5 ಮಾನದಂಡವನ್ನು ಮೀರಿವೆ ಎಂದು ವರದಿಯು ತಿಳಿಸಿದೆ.
2025ರ ಪಿಎಂ2.5 ಮೌಲ್ಯಮಾಪನದ ಪ್ರಕಾರ ಬೈರ್ನಿಹಾಟ್ (ಮೇಘಾಲಯ),ದಿಲ್ಲಿ ಮತ್ತು ಘಾಜಿಯಾಬಾದ್ (ಉ.ಪ್ರ) ಭಾರತದ ಮೂರು ಅಗ್ರ ಅತ್ಯಂತ ಕಲುಷಿತ ನಗರಗಳಾಗಿದ್ದು,ನೋಯ್ಡಾ, ಗುರುಗ್ರಾಮ, ಗ್ರೇಟರ್ ನೋಯ್ಡಾ, ಭಿವಂಡಿ, ಹಾಜಿಪುರ, ಮುಝಫ್ಫರ್ನಗರ ಮತ್ತು ಹಾಪುರ್ ನಂತರದ ಸ್ಥಾನಗಳಲ್ಲಿವೆ.
ನಿರಂತರವಾಗಿ ವಾಯು ಮಾಲಿನ್ಯವನ್ನು ಎದುರಿಸುತ್ತಿರುವ 416 ನಗರಗಳೊಂದಿಗೆ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದ್ದು, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಪಂಜಾಬ್, ಬಿಹಾರ ಮತ್ತು ಪಶ್ಚಿಮ ಬಂಗಾಳ ನಂತರದ ಸ್ಥಾನಗಳಲ್ಲಿವೆ.
ಎನ್ಸಿಎಪಿ ವ್ಯಾಪ್ತಿಯಲ್ಲಿರುವ 130 ನಗರಗಳ ಪೈಕಿ 28 ಈಗಲೂ ವಾತಾವರಣದಲ್ಲಿಯ ವಾಯು ಮಾಲಿನ್ಯವನ್ನು ನಿರಂತರ ಮೇಲ್ವಿಚಾರಣೆ ಮಾಡುವ ಕೇಂದ್ರಗಳನ್ನು ಹೊಂದಿಲ್ಲ. ಇಂತಹ ಕೇಂದ್ರಗಳನ್ನು ಹೊಂದಿರುವ 102 ನಗರಗಳ ಪೈಕಿ ನೂರು ಶೇ.80 ಅಥವಾ ಹೆಚ್ಚಿನ ಪಿಎಂ 2.5 ಮಟ್ಟವನ್ನು ವರದಿ ಮಾಡಿವೆ.
ಪಿಎಂ10 ನಿಯಂತ್ರಣದಲ್ಲಿ ಮಿಶ್ರ ಪ್ರಗತಿ ಕಂಡು ಬಂದಿದೆ. 23 ನಗರಗಳು ಶೇ.40 ಪಿಎಂ10 ಇಳಿಕೆಯ ಪರಿಷ್ಕೃತ ಗುರಿಯನ್ನು ಸಾಧಿಸಿದ್ದರೆ, 23 ನಗರಗಳು ಶೇ.21ರಿಂದ ಶೇ.40ರಷ್ಟು ಇಳಿಕೆಯನ್ನು ಮತ್ತು 26 ನಗರಗಳು ಶೇ.1ರಿಂದ ಶೇ.20ರಷ್ಟು ಸಾಧಾರಣ ಇಳಿಕೆಯನ್ನು ತೋರಿಸಿವೆ. ಆದರೆ 23 ನಗರಗಳು ವಾಸ್ತವದಲ್ಲಿ ಎನ್ಸಿಎಪಿಯ ಆರಂಭದಿಂದಲೂ ಪಿಎಂ10 ಮಟ್ಟದಲ್ಲಿ ಹೆಚ್ಚಳವನ್ನು ಅನುಭವಿಸಿವೆ ಎಂದು ವರದಿಯು ತಿಳಿಸಿದೆ.
ಪಿಎಂ10ಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನದಂಡದ ಮೂರು ಪಟ್ಟು ಮಾಲಿನ್ಯದೊಂದಿಗೆ ದಿಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಗಾಝಿಯಾಬಾದ್ ಮತ್ತು ಗ್ರೇಟರ್ ನೋಯ್ಡಾ ನಂತರದ ಸ್ಥಾನಗಳಲ್ಲಿವೆ.
ಪಿಎಂ10 ಸಾಂದ್ರತೆ ಹೆಚ್ಚಿರುವ 50 ಅಗ್ರ ನಗರಗಳ ಪೈಕಿ 18 ರಾಜಸ್ಥಾನದಲ್ಲಿದ್ದು, ಉ.ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಒಡಿಶಾ ನಂತರದ ಸ್ಥಾನಗಳಲ್ಲಿವೆ ಎಂದು ವರದಿಯು ತಿಳಿಸಿದೆ.
ಉದ್ದೇಶಿತ, ವಿಜ್ಞಾನ ಆಧಾರಿತ ಸುಧಾರಣೆಗಳ ಮೂಲಕ ದೇಶದ ವಾಯು ಗುಣಮಟ್ಟ ನಿರ್ವಹಣೆಯನ್ನು ಬಲಪಡಿಸುವುದು ಏಕೈಕ ಪರಿಹಾರವಾಗಬಹುದು ಎಂದು ಸಿಆರ್ಇಎದ ಭಾರತ ವಿಶ್ಲೇಷಕ ಮನೋಜ್ ಕುಮಾರ್ ವರದಿಯಲ್ಲಿ ಹೇಳಿದ್ದಾರೆ.
ಎನ್ಸಿಎಪಿ ಆರಂಭಗೊಂಡಾಗಿನಿಂದ 13,415 ಕೋ.ರೂ.ಗಳ ಅನುದಾನ ಬಿಡುಗಡೆಯಾಗಿದ್ದು,ಈ ಪೈಕಿ 9,929 ಕೋ.ರೂ.ಗಳು ಬಳಕೆಯಾಗಿವೆ.







