ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ : ಐವರು ಬಾಂಗ್ಲಾದೇಶಿ ಅಕ್ರಮ ವಲಸಿಗರ ಬಂಧನ

Photo | NDTV
ಹೊಸದಿಲ್ಲಿ : ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಮಧ್ಯೆ ಕೆಂಪು ಕೋಟೆ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಐವರು ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
20 ರಿಂದ 25 ವರ್ಷ ವಯಸ್ಸಿನ ಐವರು ಯುವಕರು ತಪಾಸಣೆಯ ಸಮಯದಲ್ಲಿ ಮಾನ್ಯ ಪ್ರವೇಶ ಪಾಸ್ಗಳನ್ನು ತೋರಿಸಲು ವಿಫಲರಾಗಿದ್ದಾರೆ. ಹೆಚ್ಚಿನ ವಿಚಾರಣೆಯ ವೇಳೆ ಅವರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಪೊಲೀಸ್ ಆಯುಕ್ತ ರಾಜಾ ಬಂಥಿಯಾ ಈ ಕುರಿತು ಪ್ರತಿಕ್ರಿಯಿಸಿ, ಆಗಸ್ಟ್ 4ರಂದು ಕೆಂಪು ಕೋಟೆ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ಐವರನ್ನು ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಅವರು ಸುಮಾರು ಮೂರರಿಂದ ನಾಲ್ಕು ತಿಂಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ದಿಲ್ಲಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅವರಿಂದ ಬಾಂಗ್ಲಾದೇಶದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ವಿಚಾರಣೆಯ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಯಲ್ಲಿ ಭಾಗವಹಿಸಿರುವುದು ಕಂಡು ಬಂದಿಲ್ಲ ಎಂದು ಹೇಳಿದರು.
ಕೇಂದ್ರೀಯ ತನಿಖಾ ಸಂಸ್ಥೆಗಳು ಕೂಡ ಬಂಧಿತ ಐವರನ್ನು ವಿಚಾರಣೆ ನಡೆಸಿದೆ. ಕಾನೂನು ಶಿಷ್ಟಾಚಾರದ ಪ್ರಕಾರ ಅವರನ್ನು ಭಾರತದಿಂದ ಗಡೀಪಾರು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.







