ಮಧ್ಯಪ್ರದೇಶದಲ್ಲಿ ರಕ್ತದಾನ ಪಡೆದ ಐವರು ಮಕ್ಕಳಿಗೆ ಎಚ್ಐವಿ ಸೋಂಕು : ವೈದ್ಯರಿಬ್ಬರ ಅಮಾನತು

PC | ndtv
ಭೋಪಾಲ್: ತಲೆಸ್ಸೇಮಿಯಾದಿಂದ ಬಳಲುತ್ತಿದ್ದ ಐದು ಮಕ್ಕಳು ಜೀವರಕ್ಷಕ ಚಿಕಿತ್ಸೆಗಾಗಿ ರಕ್ತ ಪಡೆದ ಬಳಿಕ ಅವರಲ್ಲಿ ಎಚ್ಐವಿ ಸೋಂಕು ಕಂಡುಬಂದಿರುವ ಘಟನೆ ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಬಹಿರಂಗಪಡಿಸಿದೆ.
ಸಾತ್ನಾದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಈ ಮಕ್ಕಳಿಗೆ ಎಚ್ಐವಿ ಸೋಂಕಿತ ರಕ್ತವನ್ನು ನೀಡಿರುವುದು ಎನ್ಡಿಟಿವಿ ತನಿಖೆಯಿಂದ ದೃಢಪಟ್ಟಿದೆ. ಇದು ಸರ್ಕಾರಿ ಆರೋಗ್ಯ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿರುವುದು ಮಾತ್ರವಲ್ಲದೇ, ರಕ್ತಸುರಕ್ಷೆ ವ್ಯವಸ್ಥೆ, ಮೇಲ್ವಿಚಾರಣೆ ಮತ್ತು ಉತ್ತರದಾಯಿತ್ವ ಅಂಶಗಳು ವ್ಯಾಪಕವಾಗಿ ಕುಸಿದಿರುವುದನ್ನೂ ಸೂಚಿಸುತ್ತದೆ.
ಜೀವರಕ್ಷಣೆಗಾಗಿ ನಿರಂತರ ರಕ್ತ ಮರುಪೂರಣ ಚಿಕಿತ್ಸೆ ಪಡೆಯುತ್ತಿದ್ದ ತಲೆಸ್ಸೇಮಿಯಾ ಮಕ್ಕಳಿಗೆ ವಿವಿಧ ಬ್ಲಡ್ಬ್ಯಾಂಕ್ಗಳಿಂದ ತಂದ ಒಟ್ಟು 189 ಯುನಿಟ್ ರಕ್ತ ನೀಡಲಾಗಿತ್ತು. 150 ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ನೀಡಲಾಗಿತ್ತು. ಮಕ್ಕಳು ಎಚ್ಐವಿ ಸೋಂಕಿತರಾದ ಬಳಿಕ ನಡೆಸಿದ ಜಿಲ್ಲಾಮಟ್ಟದ ತನಿಖೆಯಿಂದ, ದಾನಿಗಳ ರಕ್ತದ ಮೂಲಕ ಎಚ್ಐವಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ರಕ್ತ ಸ್ವೀಕರಿಸುವ ವೇಳೆ ಪಾಲಿಸಬೇಕಾದ ಸ್ಕ್ರೀನಿಂಗ್ ಮಾಡದೇ ಇರುವುದು ಇದಕ್ಕೆ ಕಾರಣ ಎನ್ನುವುದು ತಿಳಿದುಬಂದಿದೆ.
ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬ್ಲಡ್ಬ್ಯಾಂಕ್ನ ಹೊಣೆ ಹೊಂದಿದ್ದ ವೈದ್ಯರನ್ನು ಮತ್ತು ಇಬ್ಬರು ಪ್ರಯೋಗಾಲಯ ತಂತ್ರಜ್ಞರನ್ನು ಅಮಾನತುಗೊಳಿಸಿದೆ. ಸಾತ್ನಾ ಜಿಲ್ಲಾ ಆಸ್ಪತ್ರೆಯ ಮಾಜಿ ಸಿವಿಲ್ ಸರ್ಜನ್ ಡಾ.ಮನೋಜ್ ಶುಕ್ಲಾ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.







