ಕೋಲ್ಕತ್ತಾದಲ್ಲಿ ಭಾರಿ ಮಳೆಗೆ ಪ್ರವಾಹ ಸೃಷ್ಟಿ : ಐವರು ಮೃತ್ಯು

Photo | ANI
ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಭಾರಿ ಮಳೆಗೆ ಪ್ರವಾಹ ಸೃಷ್ಟಿಯಾಗಿದ್ದು, ಐವರು ಮೃತಪಟ್ಟಿದ್ದಾರೆ. ನಗರದ ವಿವಿಧ ಪ್ರದೇಶಗಳು ಜಲಾವೃತಗೊಂಡಿವೆ.
ಬೇನಿಯಾಪುಕುರ್, ಕಲಿಕಪುರ್, ನೇತಾಜಿ ನಗರ, ಗರಿಯಾಹಾಟ್ ಹಾಗೂ ಏಕ್ಬಲ್ಪುರದಲ್ಲಿ ಪ್ರಾಣಹಾನಿ ಸಂಭವಿಸಿದೆ.
ರಸ್ತೆಗಳು ಜಲಾವೃತಗೊಂಡಿದ್ದರಿಂದ, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಉಪ ನಗರ ರೈಲ್ವೆ ಹಾಗೂ ಮೆಟ್ರೊ ಸೇವೆಗಳೂ ವ್ಯತ್ಯಯಗೊಂಡಿವೆ. ನಗರದ ವಿವಿಧ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ. ಹಲವಾರು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮಳೆಯ ತೀವ್ರತೆ ಕೋಲ್ಕತ್ತಾ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಹೆಚ್ಚಿತ್ತು. ಕೋಲ್ಕತ್ತಾ ಮಹಾನಗರ ಪಾಲಿಕೆಯ ದತ್ತಾಂಶದ ಪ್ರಕಾರ, ಗರಿಯಾ ಕಾಮ್ದಹರಿಯಲ್ಲಿ ಕೆಲವೇ ಗಂಟೆಗಳಲ್ಲಿ ದಾಖಲೆಯ 332 ಮಿಮೀ ಮಳೆಯಾಗಿದ್ದರೆ, ಜೋಧ್ಪುರ್ ಪಾರ್ಕ್ ಬಳಿ 285 ಮಿಮೀ, ಕಾಳಿಘಾಟ್ ಬಳಿ 280 ಮಿಮೀ, ತೋಪ್ಸಿಯಾದ ಬಳಿ 275 ಮಿಮೀ ಹಾಗೂ ಬಲ್ಲಿಗುಂಜೆ ಬಳಿ 264 ಮಿಮೀ ಮಳೆಯಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರದಲ್ಲಿ ಇನ್ನೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.







