ಮಧ್ಯಪ್ರದೇಶ: ಬಾವಿಗೆ ಬಿದ್ದ ಕರುವನ್ನು ರಕ್ಷಿಸಲು ಹೋಗಿ ಐವರು ಮೃತ್ಯು

ಸಾಂದರ್ಭಿಕ ಚಿತ್ರ (credit: Grok)
ಭೋಪಾಲ್: ಬಾವಿಗೆ ಬಿದ್ದಿದ್ದ ಕರುವೊಂದನ್ನು ರಕ್ಷಿಸಲು ಅದಕ್ಕಿಳಿದಿದ್ದ ಸುಮಾರು 25ರಿಂದ 30 ವರ್ಷ ವಯಸ್ಸಿನೊಳಗಿನ ಐವರು, ಬಾವಿಯಲ್ಲಿನ ವಿಷಾನಿಲವನ್ನು ಸೇವಿಸಿ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.
ಸುಮಾರು 12 ಅಡಿ ನೀರು ಹೊಂದಿದ್ದ ಈ ಬಾವಿ ಧರ್ನವಾಡ ಗ್ರಾಮದ ಕೃಷಿ ಭೂಮಿಯೊಂದರಲ್ಲಿತ್ತು. ಈ ಬಾವಿಯಲ್ಲಿದ್ದ ಕಾರ್ಬನ್ ಮಾನಾಕ್ಸೈಡ್ ಅನ್ನು ಸೇವಿಸಿ, ಸಂತ್ರಸ್ತರು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
“ಕರುವೊಂದು ಬಾವಿಗೆ ಬಿದ್ದಿದ್ದರಿಂದ, ಅದನ್ನು ರಕ್ಷಿಸಲು ಐವರು ಬಾವಿಗಿಳಿದಿದ್ದರು. ಕರು ಬಾವಿಗೆ ಹೇಗೆ ಬಿದ್ದಿತು ಎಂಬ ಕುರಿತು ತನಿಖೆ ಕೈಗೊಳ್ಳಲಾಗುವುದು. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು” ಎಂದು ಗುನಾ ಜಿಲ್ಲಾಧಿಕಾರಿ ಕಿಶೋರ್ ಕನ್ಯಾಲ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲವು ವ್ಯಕ್ತಿಗಳು ತೋಟದಲ್ಲಿ ಮಾವಿನ ಹಣ್ಣು ಕೀಳುವಾಗ ಈ ಘಟನೆ ನಡೆಯಿತು ಎನ್ನಲಾಗಿದೆ. ಕರುವೊಂದು ಬಾವಿಗೆ ಬಿದ್ದಿದ್ದನ್ನು ಕಂಡ ಐವರು, ಅದನ್ನು ರಕ್ಷಿಸಲು ಒಬ್ಬರ ನಂತರ ಒಬ್ಬರು ಬಾವಿಗಿಳಿದರು. ಆದರೆ, ಯಾರೂ ಮತ್ತೆ ಮೇಲೆ ಬರಲಿಲ್ಲ ಎಂದು ಮೊದಲಿಗೆ ರಕ್ಷಣಾ ಕಾರ್ಯಾಚರಣೆಗಿಳಿದ ಸ್ಥಳೀಯರು ಹೇಳಿದ್ದಾರೆ.
ನಂತರ, ಅವರೊಂದಿಗೆ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ರಕ್ಷಣಾ ತಂಡಗಳು ಸೇರಿಕೊಂಡವು ಎಂದು ಪ್ರತ್ಯಕ್ಷದರ್ಶಿ ರಾಧಾ ಮೋಹನ್ ತಿಳಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಗುನಾದಲ್ಲಿನ ರಾಷ್ಟ್ರೀಯ ರಸಗೊಬ್ಬರ ನಿಯಮಿತ ಮತ್ತ ಗೇಲ್ ಘಟಕಗಳಲ್ಲಿ ನಿಯೋಜಿಸಲಾಗಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳು ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದರಾದರೂ, ಸಂತ್ರಸ್ತ ಐವರನ್ನು ರಕ್ಷಿಸುವಲ್ಲಿ ವಿಫಲರಾದರು.







