5 ವರ್ಷದ ಮಗುವನ್ನು ನೆಲಕ್ಕೆ ಬಡಿದು ಹತ್ಯೆಗೈದ ಸನ್ಯಾಸಿ ವಸ್ತ್ರ ಧರಿಸಿದ್ದ ವ್ಯಕ್ತಿ

Screengrab:X@SachinGuptaUP
ಮಥುರಾ: ಸನ್ಯಾಸಿಯಂತೆ ವಸ್ತ್ರ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ 5 ವರ್ಷದ ಬಾಲಕನೊಬ್ಬನನ್ನು ಥಳಿಸಿ, ನೆಲಕ್ಕೆ ಬಡಿದಿದ್ದರಿಂದ, ಆ ಬಾಲಕನು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಥುರಾ ಜಿಲ್ಲೆಯ ಗೋವರ್ಧನ್ ಪ್ರದೇಶದಲ್ಲಿ ನಡೆದಿದೆ. ಮೃತ ಬಾಲಕನು ರಾಧಾಕುಂಡ್ ಸಮುದಾಯ ಕೇಂದ್ರದ ಬಳಿ ಇರುವ ತನ್ನ ನಿವಾಸದ ಬಳಿ ಆಟವಾಡುತ್ತಿದ್ದ ಎಂದು indiatoday.in ವರದಿ ಮಾಡಿದೆ.
ಘಟನೆಯನ್ನು ನೋಡಿದ ಸ್ಥಳೀಯರು ಕೂಡಲೇ ದಾಳಿಕೋರನನ್ನು ಸೆರೆ ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರೂ, ಘಟನಾ ಪ್ರದೇಶದಲ್ಲಿ ತೀವ್ರ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಮೀಪದ ಸಿಸಿಟಿವಿ ತುಣುಕಿನಲ್ಲಿ, ರಸ್ತೆ ಮಧ್ಯೆ ಆ ವ್ಯಕ್ತಿಯು ಬಾಲಕನನ್ನು ಎದುರುಗೊಂಡಿದ್ದು, ದಿಢೀರ್ ಎಂದು ಆತನ ಮೇಲೆ ದಾಳಿ ನಡೆಸಿರುವುದು ಸೆರೆಯಾಗಿದೆ. ಆತ ಬಾಲಕನ ಕಾಲನ್ನು ಹಿಡಿದುಕೊಂಡು, ಆತನನ್ನು ನೆಲಕ್ಕೆ ಒಗೆದಿದ್ದಾನೆ. ಬಾಲಕನು ಸ್ಥಳದಲ್ಲೇ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಮರಣೋತ್ತರ ಪರೀಕ್ಷೆ ನಡೆದ ನಂತರ ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಆತನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುವುದು. ಸ್ಥಳೀಯ ಗುಪ್ತಚರ ಘಟಕವು ಸ್ಥಳೀಯರ ಹೇಳಿಕೆಗಳನ್ನು ಪರಿಶೀಲಿಸಲಿದ್ದು, ಸಮಗ್ರ ತನಿಖಾ ಪ್ರಕ್ರಿಯೆಗಳನ್ನು ಖಾತ್ರಿಗೊಳಿಸಲಾಗುವುದು” ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ತ್ರಿಗುಣ್ ಬಿಸೆನ್ ಹೇಳಿದ್ದಾರೆ.







