ಮಧ್ಯಪ್ರದೇಶ | 5ರ ಹರೆಯದ ಬಾಲಕಿ ಮೇಲೆ ಹದಿಹರೆಯದ ಯುವಕನಿಂದ ಕ್ರೂರವಾಗಿ ಹಲ್ಲೆ, ಅತ್ಯಾಚಾರ
ಸಂತ್ರಸ್ತೆಗೆ 28 ಹೊಲಿಗೆಗಳನ್ನು ಹಾಕಲಾಗಿದೆ ಎಂದ ವೈದ್ಯರು

ಗ್ವಾಲಿಯರ್: ಮಧ್ಯಪ್ರದೇಶದ ಶಿವಪುರಿಯಲ್ಲಿ 5ರ ಹರೆಯದ ಬಾಲಕಿಯ ಮೇಲೆ ಪಾನಮತ್ತ ಹದಿಹರೆಯದ ಯುವಕನೋರ್ವ ಕ್ರೂರವಾಗಿ ಹಲ್ಲೆ ಮತ್ತು ಅತ್ಯಾಚಾರ ಎಸಗಿದ್ದಾನೆ. ಘಟನೆಯಿಂದ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಆಕೆಗೆ 28 ಹೊಲಿಗೆಗಳನ್ನು ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 22ರಂದು ವಿವಾಹ ಕಾರ್ಯಕ್ರಮದ ವೇಳೆ ಬಾಲಕಿಯನ್ನು ಮನೆಯೊಂದಕ್ಕೆ ಕರೆದೊಯ್ದ ಆರೋಪಿ ಆಕೆಗೆ ಹಲ್ಲೆ ನಡೆಸಿರುವುದಲ್ಲದೆ ಕ್ರೂರವಾಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಸಂತ್ರಸ್ತೆಯ ಕುಟುಂಬಸ್ಥರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಬಿದ್ದುಕೊಂಡಿರುವುದನ್ನು ಗಮನಿಸಿದ್ದಾರೆ. ಬಾಲಕಿಯ ಮುಖ ಮತ್ತು ಮೈಮೇಲೆ ಗಾಯದ ಗುರುತುಗಳಿದ್ದವು. ಬಾಲಕಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗ್ವಾಲಿಯರ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ವೈದ್ಯರು ಹೇಳಿದ್ದೇನು?
ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆ ತರಲಾಗಿದೆ. ಬಾಲಕಿಯ ಖಾಸಗಿ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಕಾಲು, ದವಡೆ ಮತ್ತು ತಲೆಯ ಮೇಲೂ ಆಳವಾದ ಗಾಯಗಳಿವೆ. ಶಸ್ತ್ರಚಿಕಿತ್ಸೆ ನಡೆಸಿ ಬಾಲಕಿಗೆ 28 ಹೊಲಿಗೆಗಳನ್ನು ಹಾಕಲಾಗಿದೆ. ಆರೋಪಿಯು ಬಾಲಕಿಯ ಜೊತೆ ಅತ್ಯಂತ ಕ್ರೂರವಾಗಿ ವರ್ತಿಸಿರುವುದು ಕಂಡು ಬಂದಿದೆ. ಅದೃಷ್ಟಾವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಸರಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಆರ್.ಕೆ.ಎಸ್.ಧಕಡ್ ಹೇಳಿದ್ದಾರೆ.
ಘಟನೆ ಬಹಿರಂಗವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗೆ ಅತ್ಯಂತ ಕ್ರೂರವಾದ ಶಿಕ್ಷೆಯನ್ನು ವಿಧಿಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಈ ಬಗ್ಗೆ ಸಂತ್ರಸ್ತ ಬಾಲಕಿಯ ಕುಟುಂಬದ ಜೊತೆ ಮಾತುಕತೆಯನ್ನು ನಡೆಸಲಾಗಿದೆ. ಇಂತಹ ಕೃತ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಶಿವಪುರಿ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ. ನನ್ನ ಮಗಳು ಪ್ರಸ್ತುತ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಮತ್ತು ಆಕೆಯ ಸ್ಥಿತಿ ಸ್ಥಿರವಾಗಿದೆ. ನಾನು ನಿರಂತರವಾಗಿ ವೈದ್ಯರ ತಂಡದೊಂದಿಗೆ ಸಂಪರ್ಕದಲ್ಲಿದ್ದೇನೆ. ನಮ್ಮ ರಾಜ್ಯದಲ್ಲಿ ಇಂತಹ ಅಪರಾಧಗಳಿಗೆ ಅವಕಾಶವಿಲ್ಲ. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ನಮ್ಮ ಸರಕಾರದ ಮೊದಲ ಆದ್ಯತೆಯಾಗಿದೆ. ಈ ಕಷ್ಟದ ಸಮಯದಲ್ಲಿ ನಾನು ಸಂತ್ರಸ್ತೆಯ ಕುಟುಂಬದ ಜೊತೆಗಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತು ಹೆಚ್ಚುವರಿ ಎಸ್ಪಿ ಮುಳೆ ಪ್ರತಿಕ್ರಿಯಿಸಿ, ಘಟನೆ ಬೆನ್ನಲ್ಲೇ ಪಾನಮತ್ತನಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
शिवपुरी के दिनारा में हमारी मासूम बेटी के साथ हुए अमानवीय कृत्य की जानकारी मिलते ही आज परिजनों से फोन पर बातचीत की एवं उन्हें हौसला दिया। बेटी अभी अस्पताल में भर्ती है और उसकी हालत स्थिर है। मैं लगातार डॉक्टरों की टीम के संपर्क में हूं।
— Jyotiraditya M. Scindia (@JM_Scindia) February 25, 2025
हमारे क्षेत्र और प्रदेश में इस तरह के…







