50 ಲಕ್ಷ ರೂ. ವಸೂಲಿ ಮಾಡುವ ಕಥಾವಾಚಕರೂ ಇದ್ದಾರೆ: ಧೀರೇಂದ್ರ ಶಾಸ್ತ್ರಿಯನ್ನು ಟೀಕಿಸಿದ ಅಖಿಲೇಶ್ ಯಾದವ್
ಬ್ರಾಹ್ಮಣೇತರ 'ಕಥಾವಾಚಕ'ನ ಮೇಲೆ ಹಲ್ಲೆ ಬಳಿಕ ಭುಗಿಲೆದ್ದ ವಿವಾದ

ಅಖಿಲೇಶ್ ಯಾದವ್ / ಧೀರೇಂದ್ರ ಶಾಸ್ತ್ರಿ (Photo credit: NDTV)
ಲಕ್ನೋ: ಉತ್ತರ ಪ್ರದೇಶದ ಇಟಾವಾದಲ್ಲಿ ಬ್ರಾಹ್ಮಣೇತರ 'ಕಥಾವಾಚಕ'ನ ಮೇಲೆ ನಡೆದ ಹಲ್ಲೆಯ ಕುರಿತು ಭುಗಿಲೆದ್ದ ವಿವಾದದ ಮಧ್ಯೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಆಚಾರ್ಯ ಧೀರೇಂದ್ರ ಶಾಸ್ತ್ರಿ ಅವರನ್ನು ಉದ್ದೇಶಿಸಿ 50 ಲಕ್ಷ ರೂ. ಶುಲ್ಕ ವಸೂಲಿ ಮಾಡುವ ಕಥಾವಾಚಕರೂ ಇದ್ದಾರೆ ಎಂದು ಟೀಕಿಸಿದ್ದಾರೆ.
ಲಕ್ನೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, 50 ಲಕ್ಷ ರೂ.ಶುಲ್ಕ ವಿಧಿಸುವ ಕಥಾವಾಚಕರೂ ಇದ್ದಾರೆ. ಧೀರೇಂದ್ರ ಶಾಸ್ತ್ರಿಯನ್ನು ಕಥೆಗಾಗಿ ತಮ್ಮ ಮನೆಗೆ ಕರೆಯುವ ಸಾಮರ್ಥ್ಯ ಯಾರಿಗಾದರೂ ಇದೆಯಾ? ಧೀರೇಂದ್ರ ಶಾಸ್ತ್ರಿ ಹಿಂಬಾಗಿಲ ಮೂಲಕ ಹಣ ತೆಗೆದುಕೊಳ್ಳುವುದಿಲ್ಲ ಎಂದು ನೀವು ಕಂಡುಹಿಡಿಯಬೇಕು. ಕಥೆ ಹೇಳಲು ಎಷ್ಟು ಶುಲ್ಕ ವಿಧಿಸುತ್ತಾರೆಂದು ನನಗೆ ತಿಳಿದಿಲ್ಲ. ಅದು ಉಚಿತವಲ್ಲ ಎಂದು ಹೇಳಿದರು.
ಇಟಾವಾದ ಹಳ್ಳಿಯೊಂದರಲ್ಲಿ ಭಾಗವತ ಕಥಾ ಪ್ರಚಾರಕರಾದ ಮುಕುತ್ ಮಣಿ ಯಾದವ್ ಮತ್ತು ಅವರ ಸಹಾಯಕ ಸಂತ ಸಿಂಗ್ ಯಾದವ್ ಅವರನ್ನು ಯಾದವ್ ಸಮುದಾಯದವರು ಎಂದು ತಿಳಿದ ಬಳಿಕ ತಲೆ ಬೋಳಿಸಿ ಅವಮಾನಿಸಿರುವ ಆರೋಪ ಕೇಳಿ ಬಂದಿತ್ತು.
ಈ ಘಟನೆಯು ಗ್ರಾಮದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಪ್ರಕರಣಕ್ಕೆ ಸಂಬಂಧಿಸಿ ಗ್ರಾಮದ ನಿವಾಸಿಗಳಾದ ಆಶಿಶ್ ತಿವಾರಿ, ಉತ್ತಮ್ ಕುಮಾರ್ ಅವಸ್ಥಿ, ನಿಕ್ಕಿ ಅವಸ್ಥಿ ಮತ್ತು ಮನು ದುಬೆ ಎಂಬವರನ್ನು ಬಂಧಿಸಲಾಗಿತ್ತು.
ಅಖಿಲೇಶ್ ಯಾದವ್ ಅವರು ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದರು, ಅದರಲ್ಲಿ ಆರೋಪಿಗಳು ʼಬ್ರಾಹ್ಮಣರ ಹಳ್ಳಿಗೆ ಬಂದಿದ್ದಕ್ಕಾಗಿ ನಿಮಗೆ ಶಿಕ್ಷೆಯಾಗುತ್ತಿದೆʼ ಎಂದು ಹೇಳುತ್ತಿರುವುದು ಕಂಡು ಬಂದಿತ್ತು.
ಈ ಧೀರೇಂದ್ರ ಶಾಸ್ತ್ರೀ ಮಧ್ಯಪ್ರದೇಶದ ಬಾಗೇಶ್ವರ್ ಧಾಮ್ ನ ಧಾರ್ಮಿಕ ಗುರುವಾಗಿದ್ದು ಬಾಗೇಶ್ವರ್ ಬಾಬಾ ಎಂದೇ ಚಿರಪರಿಚಿತರು. ಸಂಘ ಪರಿವಾರ ಹಾಗು ಬಿಜೆಪಿಯ ಆಪ್ತ ಬಾಬಾ ಎಂದೂ ಗುರುತಿಸಲ್ಪಟ್ಟವರು.







