5000 ನಕಲಿ ವೀಸಾ, ಐದು ವರ್ಷಗಳಲ್ಲಿ ರೂ. 300 ಕೋಟಿ ವಂಚನೆ: ನಕಲಿ ವೀಸಾ ದಂಧೆಯನ್ನು ಬೇಧಿಸಿದ ಪೊಲೀಸರು

Photo: Shutterstock
ಹೊಸದಿಲ್ಲಿ: ಸೆಪ್ಟೆಂಬರ್ 2ರಂದು ಹರ್ಯಾಣದ ಸಂದೀಪ್ ಎಂಬ ವ್ಯಕ್ತಿಯನ್ನು ದಿಲ್ಲಿ ವಿಮಾನ ನಿಲ್ದಾಣದ ಇಮಿಗ್ರೇಶನ್ ತಪಾಸಣೆ ವೇಳೆ ನಕಲಿ ಸ್ವಿಡೀಷ್ ವೀಸಾದಲ್ಲಿ ಇಟಲಿಗೆ ತೆರಳಲು ಪ್ರಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು. ಇಂಥದ್ದೇ ನಕಲಿ ವೀಸಾ ಬಳಸಿಕೊಂಡು ಗ್ರಾಮದ ಹಲವು ಮಂದಿ ವಿದೇಶಗಳಿಗೆ ತೆರಳಿರುವುದನ್ನು ಈತ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಈ ಮಾಹಿತಿ ಆಧಾರದಲ್ಲಿ ಕಳೆದ ಐದು ವರ್ಷಗಳಿಂದ ದಿಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ವೀಸಾ ದಂಧೆಯನ್ನು ಪತ್ತೆ ಮಾಡಿರುವ ಪೊಲೀಸರು, ಇಂಥ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 300 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸಂಗ್ರಹಿಸಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ ಎಂದು NDTV ವರದಿಮಾಡಿದೆ.
ಆಸೀಫ್ ಅಲಿ ಎಂಬಾತನಿಂದ 10 ಲಕ್ಷ ರೂಪಾಯಿ ನೀಡಿ ನಕಲಿ ವೀಸಾ ಪಡೆದಿದ್ದಾಗಿ ಸಂದೀಪ್ ಬಹಿರಂಗಪಡಿಸಿದ್ದಾನೆ. ಪೊಲೀಸರು ಆಸೀಫ್ ಹಾಗೂ ಆತನ ಸಹಚರರಾದ ಶಿವ ಗೌತಮ್ ಮತ್ತು ನವೀನ್ ರಾಣಾ ಎಂಬಿಬ್ಬರನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಶಿವ ಗೌತಮ್ ಮತ್ತೆ ಇಬ್ಬರನ್ನು ಹೆಸರಿಸಿದ್ದು, ಇವರನ್ನು ಬಲಬೀರ ಸಿಂಗ್ ಮತ್ತು ಜಸ್ವೀಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ಕೂಡಾ ಬಂಧಿಸಿಸಲಾಗಿದೆ.
ದಿಲ್ಲಿಯ ತಿಲಕನಗರ ಪ್ರದೇಶದಿಂದ ಮನೋಜ್ ಮೋಂಗಾ ಎಂಬ ವ್ಯಕ್ತಿ ಹಲವು ದೇಶಗಳ ನಕಲಿ ವೀಸಾಗಳನ್ನು ಫ್ಯಾಕ್ಟರಿಯಲ್ಲಿ ಸಿದ್ಧಪಡಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ತಿಲಕನಗರದ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ ಮೋಗಾನನ್ನು ಬಂಧಿಸಿದ್ದಾರೆ. ಈತ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಐದು ವರ್ಷಗಳ ಹಿಂದೆ ಮನೋಜ್ ಜೈದೀಪ್ ಸಿಂಗ್ ಎಂಬಾತನನ್ನು ಭೇಟಿ ಮಾಡಿ ಗ್ರಾಫಿಕ್ ಡಿಸೈನಿಂಗ್ ಮೂಲಕ ನಕಲಿ ವೀಸಾ ತಯಾರಿಸುವ ಕೌಶಲವನ್ನು ಕಲಿಸಿದ್ದ. ಈತ ಮನೋಜ್ಗೆ ಅಗತ್ಯ ಸಲಕರಣೆಗಳನ್ನು ಕೂಡಾ ಒದಗಿಸಿದ್ದ ಎನ್ನಲಾಗಿದೆ.







