ಶೇ.51ರಷ್ಟು ಗ್ರಾಮೀಣ ಮಹಿಳೆಯರು ಮೊಬೈಲ್ ಫೋನ್ ಹೊಂದಿಲ್ಲ: ಎನ್ಎಸ್ಒ ಸಮೀಕ್ಷೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ಸುಮಾರು ಅರ್ಧದಷ್ಟು ಮಹಿಳೆಯರು ಸ್ವಂತದ ಮೊಬೈಲ್ ಫೋನ್ ಹೊಂದಿಲ್ಲ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿಯು ಇತ್ತೀಚಿಗೆ ಬಿಡುಗಡೆಗೊಳಿಸಿರುವ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿಯ 15 ವರ್ಷ ಮತ್ತು ಮೇಲ್ಪಟ್ಟ ಶೇ.51.6ರಷ್ಟು ಮಹಿಳೆಯರು ಸ್ವಂತದ ಮೊಬೈಲ್ ಫೋನ್ ಹೊಂದಿಲ್ಲ ಮತ್ತು ಶೇ.80.7ರಷ್ಟು ಪುರುಷರು ಸ್ವಂತದ ಮೊಬೈಲ್ ಫೋನ್ಗಳನ್ನು ಹೊಂದಿದ್ದಾರೆ ಎಂದು ದತ್ತಾಂಶಗಳು ತೋರಿಸಿವೆ.
ಈ ನಡುವೆ ನಗರ ಪ್ರದೇಶಗಳಲ್ಲಿ ಶೇ.71.8ರಷ್ಟು ಮಹಿಳೆಯರು ಮತ್ತು ಶೇ.90ರಷ್ಟು ಪುರುಷರು ಮೊಬೈಲ್ ಫೋನ್ಗಳನ್ನು ಹೊಂದಿದ್ದಾರೆ.
ಎನ್ಎಸ್ಒ ಸಮೀಕ್ಷೆಯು ಮೊಬೈಲ್ ಫೋನ್ ಮಾಲಿಕತ್ವವನ್ನು ವೈಯಕ್ತಿಕ ಬಳಕೆಗಾಗಿ ಸಕ್ರಿಯ ಸಿಮ್ ಕಾರ್ಡ್ ಇರುವ ಸಾಧನವನ್ನು ಹೊಂದಿರುವುದು ಎಂದು ವ್ಯಾಖ್ಯಾನಿಸಿದೆ. ಇದರಲ್ಲಿ ಉದ್ಯೋಗದಾತರು ಒದಗಿಸಿರುವ ಫೋನ್ಗಳು ಮತ್ತು ಬಳಕೆದಾರನ ಹೆಸರಿನಲ್ಲಿ ನೋಂದಣಿಯಾಗಿರದ ಫೋನ್ಗಳು ಸೇರಿವೆ.
ಮಾಲಕತ್ವವನ್ನು ನಿರ್ಧರಿಸುವಾಗ ಒಂದೇ ಮೊಬೈಲ್ ಫೋನ್ನ ಜಂಟಿ ಒಡೆತನವನ್ನು ಪರಿಗಣಿಸದೆ,ಹೆಚ್ಚಿನ ಬಳಕೆಯ ಆಧಾರದಲ್ಲಿ ಮಾಲಿಕತ್ವವನ್ನು ನಿರ್ಧರಿಸಲಾಗಿದೆ.
ಸಮೀಕ್ಷೆಯು ಕೇವಲ ಸಿಮ್ ಕಾರ್ಡ್ಗಳನ್ನು ಹೊಂದಿರುವ ವ್ಯಕ್ತಿಗಳನ್ನು ಮೊಬೈಲ್ ಫೋನ್ ಹೊಂದಿರುವವರು ಎಂದು ಪರಿಗಣಿಸಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಫೋನ್ಗಳನ್ನು ಹೊಂದಿರುವವವರ ಪೈಕಿ 15 ವರ್ಷ ಮತ್ತು ಮೇಲ್ಪಟ್ಟ ಶೇ.79.2ರಷ್ಟು ಪುರುಷರ ಮತ್ತು ಶೇ.75.6ರಷ್ಟು ಮಹಿಳೆಯರ ಬಳಿ ಸ್ಮಾರ್ಟ್ಪೋನ್ಗಳಿವೆ ಎಂದೂ ದತ್ತಾಂಶಗಳು ಬಹಿರಂಗಗೊಳಿಸಿವೆ. ನಗರ ಪ್ರದೇಶಗಳಲ್ಲಿ ಇದು ಅನುಕ್ರಮವಾಗಿ ಶೇ.89.4 ಮತ್ತು ಶೇ.86.2 ಆಗಿದೆ.
ಮೊಬೈಲ್ ಫೋನ್ ಮಾಲಿಕತ್ವದಲ್ಲಿ ಲಿಂಗ ವಿಭಜನೆಯು ಯುವಜನರಲ್ಲಿಯೂ ಸ್ಪಷ್ಟವಾಗಿ ಕಂಡು ಬಂದಿದೆ. 15ರಿಂದ 24 ವರ್ಷ ವಯೋಮಾನದ ಶೇ.74.8ರಷ್ಟು ಗ್ರಾಮೀಣ ಪುರುಷರು ಸ್ವಂತದ ಮೊಬೈಲ್ ಫೋನ್ ಹೊಂದಿದ್ದರೆ,ಇದು ಮಹಿಳೆಯರಲ್ಲಿ ಕೇವಲ ಶೇ.51.7ರಷ್ಟಿದೆ.
ಆದಾಗ್ಯೂ ಮೊಬೈಲ್ ಫೋನ್ಗಳ ಬಳಕೆಯ ವಿಷಯದಲ್ಲಿ ವಿಭಜನೆ ಕಡಿಮೆ ಪ್ರಮಾಣದಲ್ಲಿದೆ. ಸಮೀಕ್ಷೆ ದಿನಾಂಕದ ಹಿಂದಿನ ಮೂರು ತಿಂಗಳ ಅವಧಿಯಲ್ಲಿ ಶೇ.76.3ರಷ್ಟು ಗ್ರಾಮೀಣ ಮಹಿಳೆಯರು ಮತ್ತು ನಗರ ಪ್ರದೇಶಗಳ ಶೇ.86.8ರಷ್ಟು ಮಹಿಳೆಯರು ಒಮ್ಮೆಯಾದರೂ ವೈಯಕ್ತಿಕ ಕರೆಗಳನ್ನು ಮಾಡಲು ಅಥವಾ ಅಂತರ್ಜಾಲವನ್ನು ಪ್ರವೇಶಿಸಲು ಮೊಬೈಲ್ ಫೋನ್(ಸ್ಮಾರ್ಟ್ ಫೋನ್ ಅಥವಾ ಇತರ) ಬಳಸಿರುವುದಾಗಿ ತಳಿಸಿದ್ದಾರೆ. ಇದು ಗ್ರಾಮೀಣ ಪುರುಷರಲ್ಲಿ ಶೇ.89.5 ಮತ್ತು ನಗರ ಪ್ರದೇಶಗಳ ಪುರುಷರಲ್ಲಿ ಶೇ.95ರಷ್ಟಿತ್ತು.
ಸಮೀಕ್ಷೆಯು 15ರಿಂದ 24 ವರ್ಷ ವಯೋಮಾನದವರಲ್ಲಿ ಬಹುತೇಕ ಎಲ್ಲರಿಂದ ಮೊಬೈಲ್ ಫೋನ್ ಬಳಕೆಯನ್ನು ತೋರಿಸಿದೆ. ಸಮೀಕ್ಷೆ ದಿನಾಂಕದ ಹಿಂದಿನ ಮೂರು ತಿಂಗಳುಗಳ ಅವಧಿಯಲ್ಲಿ ಶೇ.98ರಷ್ಟು ಗ್ರಾಮೀಣ ಪುರುಷರು ಮತ್ತು ಶೇ.97.6ರಷ್ಟು ನಗರ ಪ್ರದೇಶಗಳ ಪುರುಷರು ತಾವು ಮೊಬೈಲ್ ಫೋನ್ ಬಳಸಿದ್ದಾಗಿ ತಿಳಿಸಿದ್ದಾರೆ. ಈ ಪ್ರಮಾಣ ಇದೇ ವಯೋಮಾನದ ಗ್ರಾಮೀಣ ಮಹಿಳೆಯರಲ್ಲಿ ಶೇ.95.7 ಮತ್ತು ನಗರ ಪ್ರದೇಶಗಳ ಮಹಿಳೆಯರಲ್ಲಿ ಶೆ.96.9ರಷ್ಟಿತ್ತು.
2025 ಜನವರಿ ಮತ್ತು ಮಾರ್ಚ್ ನಡುವೆ ಸಮೀಕ್ಷೆಯನ್ನು ನಡೆಸಲಾಗಿತ್ತು.







